ಸುಂಟಿಕೊಪ್ಪ, ಏ. ೨೦: ನಾರ್ಗಾಣೆ ಗ್ರಾಮದ ಶ್ರೀದೇವಿಯ ಅಣ್ಣಪ್ಪಸ್ವಾಮಿ ದೇವಾಲಯದಲ್ಲಿ ೩೬ನೇ ವರ್ಷದ ಧರ್ಮದೈವದ ನೇಮೋತ್ಸವ ತಾ. ೧೩, ೧೪ ಮತ್ತು ೧೫ ರಂದು ೩ ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯ ಹಾಗೂ ಧರ್ಮ ದೈವಗಳ ನೇಮೋತ್ಸವ ಜರುಗಿತು.

ಅಣ್ಣಪ್ಪಸ್ವಾಮಿ ದೇವಾಲಯದಲ್ಲಿ ಧರ್ಮ ದೈವದ ನೇಮೋತ್ಸವದ ಅಂಗವಾಗಿ ದೇವಾಲಯದ ಆವರಣದ ವ್ಯಾಪ್ತಿಯಲ್ಲಿ ತಳಿರು ತೋರಣ, ವಿವಿಧ ಬಗೆಯ ಬಣ್ಣ ಬಣ್ಣ ಹೂಗಳಿಂದ, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.

ತಾ. ೧೩ ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ ಮತ್ತು ಶುದ್ಧ ಕಲಶದೊಂದಿಗೆ ನೇಮೋತ್ಸವಕ್ಕೆ ಚಾಲನೆ ನೀಡಲಾಯಿತು. ತಾ. ೧೪ ರಂದು ಸಂಜೆ ೬ಗಂಟೆಗೆ ಶ್ರೀ ಸ್ವಾಮಿ ಮತ್ತು ಅಮ್ಮನವರ ಭಂಡಾರ ಮೆರವಣಿಗೆ, ೮.೩೦ ಗಂಟೆಗೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ, ರಾತ್ರಿ ೯ ಗಂಟೆಯಿAದ ಧರ್ಮದೇವತೆಯಾದ ಕಲ್ಲುರ್ಟಿ (ಪಾಷಣಮೂರ್ತಿ) ದೈವದ ನೇಮ ಹಾಗೂ ಸಿರಿ ಗಂಧ ಪ್ರಸಾದ ವಿತರಣೆ ನಡೆಯಿತು. ಮಧ್ಯರಾತ್ರಿ ೧೨ ಗಂಟೆಯಿAದ ಧರ್ಮದೈವವಾದ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ನೇಮ ನಡೆಯಿತು. ನಂತರ ೩ ಗಂಟೆಗೆ ಶ್ರೀ ಚಾಮುಂಡೇಶ್ವರಿ ಮತ್ತು ದೈವರಾಜ ಗುಳಿಗ ದೈವಗಳ ನೇಮೋತ್ಸವ ನೆರವೇರಿತು.

ಬುಧವಾರ ಬೆಳಿಗ್ಗೆ ೬ ಗಂಟೆಗೆ ಧೂಮಾವತಿ (ಜುಮಾದಿ) ದೈವದ ಹರಕೆಯ ಕೋಲ ನಡೆಯಲಿದೆ. ಬೆಳಿಗ್ಗೆ ೮ ಗಂಟೆಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ನೆರದಿದ್ದ ಭಕ್ತಾದಿಗಳಿಗೆ ಧರ್ಮದೈವಕ್ಕೆ ಅರ್ಪಣೆಯನ್ನು ನೀಡಲಾಯಿತು. ೯ ಗಂಟೆಗೆ ಧರ್ಮದೈವದ ಹರಕೆ, ಬೇಡಿಕೆಗಳನ್ನು ಭಕ್ತಾದಿಗಳು ಆರ್ಪಿಸಿದರು. ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರೆವೇರಿತು.

ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ಜರುಗಿತು. ನಾರ್ಗಾಣೆ ಗ್ರಾಮದ ಶ್ರೀ ದೇವಿಯ ಅಣ್ಣಪ್ಪಸ್ವಾಮಿ ದೇವಾಲಯ ಪ್ರಮುಖರಾದ ಬಿ.ಡಿ. ರಾಜು ರೈ ಹಾಗೂ ಶಿವಪ್ರಸಾದ್ ರೈ ಕುಟುಂಬಸ್ಥರು ಇದ್ದರು.

ಸುತ್ತಮುತ್ತಲ ಗ್ರಾಮ ಹಾಗೂ ಊರುಗಳಾದ ವೀರಾಜಪೇಟೆ, ಸಿದ್ದಾಪುರ, ಕುಶಾಲನಗರ, ಮಾದಾಪುರ, ಗರಗಂದೂರು, ಕೊಡಗರಹಳ್ಳಿ, ಹೊಸಕೋಟೆ ಹಾಗೂ ನೆರೆಯ ಜಿಲ್ಲೆಯ ಸುಳ್ಯ, ಪುತ್ತೂರು ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದರು.