ಸೋಮವಾರಪೇಟೆ, ಏ. ೧೯: ಸರ್ಫೇಸಿ ಕಾಯ್ದೆಯು ಕಾಫಿ ಬೆಳೆಗಾರರಿಗೆ ಮಾರಕವಾಗುತ್ತಿದ್ದು, ಈ ಬಗ್ಗೆ ಬೆಳೆಗಾರರು ಜಾಗೃತರಾಗಬೇಕೆಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ನಿರ್ದೇಶಕ ಸಿ.ಕೆ.ಮಲ್ಲಪ್ಪ ಕರೆ ನೀಡಿದರು.
ತಾಲೂಕಿನ ತೋಳೂರು ಶೆಟ್ಟಳ್ಳಿ ಗ್ರಾಮದ ಸುಗ್ಗಿಕಟ್ಟೆಯಲ್ಲಿ ತಾಲೂಕು ಕಾಫಿ ಬೆಳೆಗಾರರ ಸಂಘದಿAದ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಕಾಫಿ ಬೆಳೆಗಾರರು ಇಂದು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಬೆಳೆಗಾರರು ಬ್ಯಾಂಕ್‌ಗಳಿAದ ಪಡೆದಿರುವ ಸಾಲವನ್ನು ವಿವಿಧ ಕಾರಣಗಳಿಂದ ಸಮಯಕ್ಕೆ ಸರಿಯಾಗಿ ತೀರಿಸಲು ಸಾಧ್ಯವಾಗದೆ ಇರುವ ಪರಿಸ್ಥಿತಿ ಉಂಟಾಗಿದೆ. ಹವಾಮಾನ ವೈಪರಿತ್ಯ, ಬೆಲೆ ಕುಸಿತ, ಕಾಡು ಪ್ರಾಣಿಗಳ ಹಾವಳಿ, ಅಕಾಲಿಕ ಮಳೆ, ಫಸಲು ಹಾನಿ, ಬೆಲೆ ಕುಸಿತ ಮುಂತಾದ ಸಮಸ್ಯೆಗಳು ಬೆಳೆಗಾರರ ಆರ್ಥಿಕ ಸ್ಥಿತಿಯನ್ನು ದುರ್ಬಲಗೊಳಿಸುತ್ತಿವೆ. ಈ ಸಂದರ್ಭದಲ್ಲಿ ಸರ್ಫೇಸಿ ಕಾಯ್ದೆಯಡಿ ಬ್ಯಾಂಕ್‌ಗಳು ನೇರವಾಗಿ ಕಾಫಿ ತೋಟಗಳನ್ನು ಹರಾಜು ಮಾಡುವ ನೋಟಿಸ್ ನೀಡುತ್ತಿರುವುದು ಕಳವಳಕಾರಿ ಎಂದು ಬೇಸರ ವ್ಯಕ್ತಪಡಿಸಿದರು.
ಕಾಫಿಯನ್ನು ವಾಣಿಜ್ಯ ಬೆಳೆಯಾಗಿ ಪರಿಗಣಿಸಿರುವ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುತ್ತಿವೆ. ಕಾಫಿಯನ್ನು ಕೃಷಿ ವಲಯಕ್ಕೆ ಸೇರಿಸಬೇಕು. ಈ ಬಗ್ಗೆ ಜನಪ್ರತಿನಿಧಿಗಳು ಹೋರಾಟ ರೂಪಿಸಬೇಕು ಎಂದು ಒತ್ತಾಯಿಸಿದರು. ಬೆಳೆಗಾರರಿಗೆ ಸೂಕ್ತವಾದ ರಿಯಾಯಿತಿಗಳನ್ನು ನೀಡದೆ ನೇರವಾಗಿ ಹರಾಜು ಪ್ರಕ್ರಿಯೆಗೆ ಮುಂದಾಗುವುದು ನ್ಯಾಯಸಮ್ಮತವಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರವು ಬೆಳೆಗಾರರ ಪರವಾಗಿ ನಿಂತು ಸರ್ಫೇಸಿ ಕಾಯ್ದೆಯ ಅನ್ವಯಕ್ಕೆ ಮಿತಿ ವಿಧಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಬೆಳೆಗಾರರು ಎದುರಿಸುತ್ತಿರುವ ಕಾಡು ಪ್ರಾಣಿಗಳ ಹಾವಳಿ ಬಗ್ಗೆ ಮಾತನಾಡಿ, ಕಾಫಿ ತೋಟಗಳಿಗೆ ಕಾಡಾನೆಗಳು, ಕಾಡುಕೋಣಗಳು ಸೇರಿದಂತೆ ಹಲವು ಪ್ರಾಣಿಗಳಿಂದ ಹಾನಿಉಂಟಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸೋಮವಾರಪೇಟೆ ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ. ಲವ ಮಾತನಾಡಿ, ಬೆಳೆಗಾರರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದು ಅತ್ಯಂತ ಅಗತ್ಯವಾಗಿದೆ. ಸಂಘಟಿತ ಹೋರಾಟಗಳನ್ನು ರೂಪಿಸದಿದ್ದರೆ ಮುಂದೊAದು ದಿನ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಸಂಘದ ಕಾರ್ಯದರ್ಶಿ ಎಂ.ಯA. ಮನೋಹರ್, ನಿರ್ದೇಶಕರಾದ ಅನಂತರಾಮ್, ದಳವಾಯಿ ರಾಜು, ಯು.ಬಿ. ರಾಜಪ್ಪ, ಮಾಚಯ್ಯ, ನಿಂಗಪ್ಪ, ತೋಳೂರು ಶೆಟ್ಟಳ್ಳಿ ಗ್ರಾಮ ಮಂಡಳಿ ಅಧ್ಯಕ್ಷ ರಾಜಗೋಪಾಲ್, ಕಾರ್ಯದರ್ಶಿ ಮಹೇಶ್ ಸೇರಿದಂತೆ ಇತರರು ಹಾಜರಿದ್ದರು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು.
ಸಭೆಯ ಅಂತ್ಯದಲ್ಲಿ, ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಸಂಘದ ಮೂಲಕ ಹೋರಾಟ ನಡೆಸಲು ನಿರ್ಧಾರ ಕೈಗೊಳ್ಳಲಾಯಿತು. ಸರ್ಕಾರ ಮತ್ತು ಬ್ಯಾಂಕ್‌ಗಳು ಬೆಳೆಗಾರರ ಸಂಕಷ್ಟವನ್ನು ಮನಗಂಡು ಮಾನವೀಯ ದೃಷ್ಟಿಕೋನದಿಂದ ನಡೆದುಕೊಳ್ಳಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.