ನಾಪೋಕ್ಲು, ಏ. ೧೮: ನಾಪೋಕ್ಲು ವ್ಯಾಪ್ತಿಯಲ್ಲಿ ನಿರಂತರವಾಗಿ ವಿದ್ಯುತ್ ಸಮಸ್ಯೆ ತಲೆದೂರಿದ್ದು ಇದರಿಂದ ನಾಗರಿಕರಿಗೆ ತೊಂದರೆಯಾಗುತ್ತಿದೆ ಕೂಡಲೇ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿ ನಾಪೋಕ್ಲು ಹೋಬಳಿ ವ್ಯಾಪ್ತಿಯ ನಾಗರಿಕರು ನಾಪೋಕ್ಲು ಚೆಸ್ಕಾಂ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.
ನಾಪೋಕ್ಲು ಚೆಸ್ಕಾಂ ಕಛೇರಿಯ ಮುಂಭಾಗ ಪ್ರತಿಭಟನೆ ನಡೆಸಿದ ನಾಗರಿಕರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ನಾಪೋಕ್ಲುವಿನ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಅವರು ಮಾತನಾಡಿ ನಾಪೋಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ಫೀಡರ್ನಲ್ಲಿ ಜಾಲ ಬಲವರ್ಧನೆ ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ಬೆಳಿಗ್ಗೆಯಿಂದ ಸಂಜೆ ವರೆಗೂ ನಾಪೋಕ್ಲು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಇಲಾಖೆ ಪ್ರಕಟಣೆ ನೀಡಲಾಗುತ್ತಿದೆ. ಆದರೂ ರಾತ್ರಿಯಿಂದ ಮುಂಜಾನೆವರೆಗೆ ವಿದ್ಯುತ್ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಮುಂದಿನ ೧೫ದಿನದೊಳಗೆ ವಿದ್ಯುತ್ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬೆಳಿಗ್ಗೆಯಿಂದ ಸಂಜೆವರೆಗೂ ವಿದ್ಯುತ್ ಜಾಲ ಬಲವರ್ಧನೆ ಕಾಮಗಾರಿ ವೇಳೆ ವಿದ್ಯುತ್ ಕಡಿತಗೊಳಿಸಲಿ. ಆದರೆ ರಾತ್ರಿ ಸಮಯ ವಿದ್ಯುತ್ ಕಡಿತಗೊಳಿಸಿ ಜನರಿಗೆ ಸಮಸ್ಯೆ ಉಂಟುಮಾಡುವುದು ಸರಿಯಲ್ಲ. ಇದರಿಂದ ಕುಡಿಯುವ ನೀರಿಗೂ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೂಡಲೇ ವಿದ್ಯುತ್ ಸಮಸ್ಯೆ ಸರಿಪಡಿಸಬೇಕೆಂದು ಪ್ರಮುಖರಾದ ಕೇಟೋಳಿರ ಹರೀಶ್ ಪೂವಯ್ಯ, ಕಂಗAಡ ಜಾಲಿ ಪೂವಪ್ಪ, ಮುಕ್ಕಾಟಿರ ವಿನಯ್ ಮತ್ತಿತರರು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ಚೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿನಯ್ ಕುಮಾರ್ ಪ್ರತಿಕ್ರಿಯಿಸಿ ನಾಪೋಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ಜಾಲ ಬಲವರ್ಧನೆ ಕಾಮಗಾರಿ ಪೂರ್ಣಗೊಂಡಿದೆ. ಮುಂದಿನ ೧೦ದಿನಗಳಲ್ಲಿ ಸಮಸ್ಯೆ ಪರಿಹರಿಸಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭ ಶಿವಚಾಳಿಯಂಡ ಜಗದೀಶ್, ಪಾಡಿಯಮ್ಮಂಡ ಮನು ಮಹೇಶ್, ಕನ್ನಂಬಿರ ಸುಧಿ ತಿಮ್ಮಯ್ಯ ಕಿಶೋರ್ ಬೋಪಣ್ಣ, ಚಿಯಕ್ ಪೂವಂಡ ಸತೀಶ್, ಡಾಲಿ ಅಚ್ಚಪ್ಪ ಕುಂಡ್ಯೋಳAಡ ಜತ್ತಿ, ಪಾಲಚಂಡ ಸೀಮ, ಅರೆಯಡ ಅಶೋಕ್, ಬಾಳೆಯಡ ಮಧು, ಕುಲ್ಲೇಟಿರ ಅಜಿತ್ ನಾಣಯ್ಯ, ಪಟ್ರಪಂಡ ನಿರನ್, ಬಿದ್ದಾಟಂಡ ಕವಿನ್,ಟಿ. ಕೆ. ಸುಕುಮಾರ್, ಅಯ್ಯಪ್ಪ, ಮುತ್ತಣ್ಣ ಕಿಶೋರ್ ಬೋಪಣ್ಣ ಪ್ರಸಾದ್, ನಾಪೋಕ್ಲು ಚೆಸ್ಕಾಂ ಅಭಿಯಂತರ ಹರೀಶ್ ಸೇರಿದಂತೆ ನಾಪೋಕ್ಲು ವಿಭಾಗದ ಮತ್ತಿತರ ಪ್ರಮುಖರು ಹಾಜರಿದ್ದರು.