ಮಡಿಕೇರಿ, ಏ. ೧೮: ಹಲವು ವರ್ಷಗಳ ಕನಸಾಗಿರುವ ಬಂಟರ ಭವನ ನಿರ್ಮಾಣ ಕಾಮಗಾರಿಯ ಕನಸು ಇದೀಗ ಸಾಕಾರಗೊಳ್ಳುತ್ತಿದೆ. ಕೊಡಗು ಬಂಟರ ಭವನ ಟ್ರಸ್ಟ್ ಮತ್ತು ಕೊಡಗು ಜಿಲ್ಲಾ ಬಂಟರ ಸಂಘದ ವತಿಯಿಂದ ನೂತನ ಭವನ ನಿರ್ಮಾಣ ಕಾಮಗಾರಿಗೆ ಯೋಜನೆ ರೂಪಿಸಲಾಗಿದೆ. ಮಡಿಕೇರಿಯ ರಾವ್ ಬಹದ್ದೂರ್ ರಾಮಯ್ಯ ಪೂಂಜ ರಸ್ತೆ(ಅಬ್ಬಿಫಾಲ್ಸ್ ರಸ್ತೆ)ಯಲ್ಲಿ ನೂತನವಾದ ಸುಸಜ್ಜಿತ ವ್ಯವಸ್ಥೆಗಳನ್ನು ಒಳಗೊಂಡ ಕಟ್ಟಡ ನಿರ್ಮಾಣಕ್ಕೆ ಅಂದಾಜು ರೂ. ೧೨ ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದ್ದು, ಈಗಾಗಲೇ ನೀಲಿ ನಕಾಶೆ ಸಿದ್ಧಪಡಿಸಲಾಗಿದೆ. ಮೇ ೧ ರಂದು ಶಂಕುಸ್ಥಾಪನೆ ನೆರವೇರಿಸಲಾಗುತ್ತಿದ್ದು, ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೊಡಗು ಬಂಟರ ಭವನ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷರಾದ ಇತ್ತೀಚೆಗಷ್ಟೇ ನಿಧನರಾದ ಡಾ. ಬಿ.ಟಿ. ಪ್ರೇಮನಾಥ್ ಪೂಂಜ ಅವರು ಭವನ ನಿರ್ಮಾಣಕ್ಕೆ ಸ್ಥಳ ದಾನಿಗಳಾಗಿದ್ದಾರೆ. ಅಬ್ಬಿಫಾಲ್ಸ್ ರಸ್ತೆಯಲ್ಲಿ ಇವರು ನೂತನ ಭವನ ನಿರ್ಮಿಸಲು ೫೨ ಸೆಂಟ್ ನಷ್ಟು ಜಾಗವನ್ನು ಉದಾರವಾಗಿ ನೀಡಿದ್ದಾರೆ.

ಮೇ ೧ ರಂದು ಕೊಡಗು ಬಂಟರ ಭವನ ಟ್ರಸ್ಟ್ನ ಆಡಳಿತ ಟ್ರಸ್ಟಿ ಹಾಗೂ ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ. ಜಗದೀಶ್ ರೈ ಅವರ ಅಧ್ಯಕ್ಷತೆಯಲ್ಲಿ ಶಂಕುಸ್ಥಾಪನಾ ಸಮಾರಂಭ ಜರುಗಲಿದೆ. ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರು ಉದ್ಘಾಟನೆ ನೆರವೇರಿಸಲಿದ್ದು, ಒಡಿಯೂರಿನ ಗುರುದೇವದತ್ತ ಸಂಸ್ಥಾನAನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಡಿಕೇರಿ ನಗರಸಭಾ ಅಧ್ಯಕ್ಷೆ ಕಲಾವತಿ, ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಬ್ರಿಜೇಶ್ ಚೌಟ, ಎಂಎಲ್ಸಿ ಎಂ.ಪಿ. ಸುಜಾ ಕುಶಾಲಪ್ಪ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಂಗಳೂರು ಬಂಟ ಮತ್ತು ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಮುಂಬೈನವರಾದ ಉದ್ಯಮಿ, ದಾನಿ ಡಾ. ಸದಾಶಿವ ಶೆಟ್ಟಿ ಕನ್ಯಾನ, ಭವಾನಿ ಶಿಪ್ಪಿ೦ಂಗ್‌ನ ಆಡಳಿತ ನಿರ್ದೇಶಕ ಕುಸುಮೋದರ ಡಿ. ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಯುವ ವಿಭಾಗದ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತಳ್ಳೂರು ಸೇರಿದಂತೆ ಅನೇಕ ಗಣ್ಯರು, ಬಂಟರ ಸಂಘದ ವಿವಿಧ ಘಟಕಗಳ ಪ್ರಮುಖರು ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.