ಮಡಿಕೇರಿ, ಏ. ೧೭; ಮಡಿಕೇರಿ ನಗರದ ಜನತೆಗೆ ನಗರಸಭೆ ಮೂಲಕ ಕಸ ಮಿಶ್ರಿತ ಕಲ್ಮಶ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಮಡಿಕೇರಿ ಬ್ಲಾಕ್ ಯುವ ಕಾಂಗ್ರೆಸ್ ಹಾಗೂ ಮಡಿಕೇರಿ ನಗರ ಕಾಂಗ್ರೆಸ್ ಪದಾಧಿಕಾರಿಗಳು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೋಚನ ಚೇತನ್; ನಿನ್ನೆ ರಾತ್ರಿ ೧೦ ಗಂಟೆ ವೇಳೆಗೆ ನಗರಸಭೆ ಮುಂಭಾಗದ ರಸ್ತೆ ಬದಿ ಜಗಳವಾಗುತ್ತಿದ್ದಾಗ ಅಲ್ಲಿಗೆ ಧಾವಿಸಿ ನೋಡಿದಾಗ ಪೌರ ಕಾರ್ಮಿಕರು ಹಾಗೂ ವ್ಯಾಪಾರಿಗಳ ನಡುವೆ ಕಸದ ವಾಹನಕ್ಕೆ ಕಸ ಹಾಕುವ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಪೌರ ಕಾರ್ಮಿಕರು ವಾಹನಕ್ಕೆ ಕಸ ಹಾಕಬಾರದೆಂದು ಹೇಳುತ್ತಿದ್ದರು.

ಈ ಬಗ್ಗೆ ವಿಚಾರಿಸಿದಾಗ ವಾಹನದಲ್ಲಿ ಮಡಿಕೇರಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಶುದ್ಧೀಕರಣ ಘಟಕಕ್ಕೆ ಬಳಸಲಾಗುವ ಆಲಂ ಹಾಗೂ ಬ್ಲೀಚಿಂಗ್ ರಾಸಾಯನಿಕಗಳಿವೆ ಹಾಗಾಗಿ ಕಸ ಹಾಕಬಾರದು ಎಂದು ಉತ್ತರ ನೀಡಿದರು. ಪರಿಶೀಲನೆ ಮಾಡಿದಾಗ ಕೊಳೆತ ಕಸದ ರಾಶಿಯ ನಡುವೆ ಆಲಂ ಹಾಗೂ ಬ್ಲೀಚಿಂಗ್ ಇರುವದು ಪತ್ತೆಯಾಯಿತು. ಈ ಹಿಂದಿನಿAದಲೂ ಕಸದ ವಾಹನದಲ್ಲಿಯೇ ರಾಸಾಯನಿಕಗಳನ್ನು ಸರಬರಾಜು ಮಾಡುತ್ತಿರುವುದಾಗಿ ಪೌರ ಕಾರ್ಮಿಕರು ತಿಳಿಸಿದರು. ಹಾಗಾಗಿ ನಗರಸಭೆ ಮಡಿಕೇರಿ ಜನತೆಗೆ ಇದುವರೆಗೆ ಕಸ ಮಿಶ್ರಿತ ಕಲ್ಮಶ ನೀರನ್ನೇ ಸರಬರಾಜು ಮಾಡುತ್ತಿದೆ ಎಂದು ಆರೋಪಿಸಿದರು.

ನಗರಸಭೆಯಲ್ಲಿ ರಾಸಾಯನಿಕ ಸರಬರಾಜು ಮಾಡಲು ಬೇರೆ ವಾಹನವಿಲ್ಲವೇ? ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಈ ವಿಚಾರ ಗಮನಕ್ಕೆ ಬರಲಿಲ್ಲವೇ ಎಂದು ಪ್ರಶ್ನಿಸಿದ ಅವರು; ಈ ಬಗ್ಗೆ ಸೂಕ್ತ ಕ್ರಮ ಆಗಬೇಕೆಂದು ಒತ್ತಾಯಿಸಿದರು. ನಗರದಲ್ಲಿ ರಾತ್ರಿ ವೇಳೆ ವ್ಯಾಪಾರ ಮಾಡುವವರಿಗೆ ಕಸ ಹಾಕಲು ಯಾವದೇ ಬೇರೆ ವ್ಯವಸ್ಥೆಗಳಿಲ್ಲ. ಹಾಗಾಗಿ ಕಸದ ಗಾಡಿಗಳಿಗೆ ಹಾಕುತ್ತಾರೆ. ಅವರುಗಳಿಗೆ ಕಸ ಹಾಕಲು ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.

ಮಡಿಕೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕವನ್ ಕೊತ್ತೋಳಿ ಮಾತನಾಡಿ; ಕಸದ ವಾಹನಗಳಲ್ಲಿ ರಾಸಾಯನಿಕಗಳನ್ನು ಸರಬರಾಜು ಮಾಡುವದರಿಂದ ಕೊಳಚೆ ನೀರನ್ನು ಜನತೆಗೆ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ನೀಡಿದಂತಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ. ಪ್ರತಿನಿಧಿಗಳಿಗೆ ಮಾಹಿತಿ ಇಲ್ಲವೇ ಎಂದು ಪ್ರಶ್ನಿಸಿದರಲ್ಲದೆ, ಇದಕ್ಕೆ ನಗರಸಭೆ ಅಧ್ಯಕ್ಷರು ಉತ್ತರಿಸಬೇಕು. ಅಧ್ಯಕ್ಷರು, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಹೋರಾಟದ ನಿರ್ಧಾರ

ಗಾಂಧಿ ಮೈದಾನದ ಬಳಿ ತಲೆ ಎತ್ತುತ್ತಿರುವ ಬಹುಮಹಡಿ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ನಗರಸಭೆಯಲ್ಲಿ ತೀರ್ಮಾನವಾಗಿದ್ದರೂ ಕೆಲಸ ನಡೆಯುತ್ತಲೇ ಇದೆ. ಈ ವಿಚಾರದಲ್ಲಿ ಬಿಜೆಪಿ ಸದಸ್ಯರುಗಳು ಶಾಸಕರ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಶಾಸಕರಿಗೂ ಇದಕ್ಕೂ ಯಾವುದೇ ಸಂಬAಧವಿಲ್ಲ, ಕಾಮಗಾರಿಯನ್ನು ನಿಲ್ಲಿಸದಿದ್ದಲ್ಲಿ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹೋರಾಟ ಮಾಡುವದಾಗಿ ಚೇತನ್ ಹಾಗೂ ಕವನ್ ಹೇಳಿದರು. ಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಅಧ್ಯಕ್ಷ ಮುದ್ದುರಾಜ್ ಇದ್ದರು.