ಕುಶಾಲನಗರ, ಏ. ೧೭: ನವಜಾತ ಶಿಶುವಿನ ದೇಹವನ್ನು ಶಾಲಾ ಮಕ್ಕಳ ಬ್ಯಾಗ್ ಒಂದರಲ್ಲಿ ತುಂಬಿಸಿ ನದಿಗೆ ತಟದಲ್ಲಿ ಎಸೆದಿರುವ ಅಮಾನವೀಯ ಪ್ರಕರಣ ಒಂದು ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಕುಶಾಲನಗರ ಕೊಪ್ಪ ಸೇತುವೆಯ ಕೆಳಭಾಗದಲ್ಲಿ ಶಾಲಾ ಬ್ಯಾಗ್ ಒಂದರಲ್ಲಿ ಗಂಡು ಮಗುವಿನ ದೇಹ ಪತ್ತೆಯಾಗಿದ್ದು ಕುಶಾಲನಗರ ಪೊಲೀಸ್ ಠಾಣೆ ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಗೀತಾ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಕ್ರಮ ಕೈಗೊಂಡಿದ್ದಾರೆ. ಕಾವೇರಿ ನದಿಯಲ್ಲಿ ಗುರುವಾರ ಬೆಳಗ್ಗಿನ ವೇಳೆ ವ್ಯಕ್ತಿಯೊಬ್ಬ ಬ್ಯಾಗನ್ನು ಕಂಡು ಪರಿಶೀಲಿಸಿದಾಗ ಆಗ ತಾನೇ ಜನಿಸಿದ ಮಗುವಿನ ದೇಹ ಗೋಚರಿಸಿದೆ.
ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಪರಿಶೀಲನೆ ನಡೆಸಿದ್ದು ಸಮೀಪದ ಆಸ್ಪತ್ರೆಗಳಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ಸುತ್ತುಮುತ್ತಲಿನ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.