ಗೋಣಿಕೊಪ್ಪಲು, ಏ. ೧೭: ದ.ಕೊಡಗಿನ ಕೊಡಗು-ಕೇರಳ ಗಡಿಭಾಗವಾದ ಕುಟ್ಟ ಸರ್ಕಾರಿ ಶಾಲಾ ಮೈದಾನದಲ್ಲಿ ನಾಳೆಯಿಂದ ಕ್ರಿಕೆಟ್ ಸಂಭ್ರಮ ನಡೆಯಲಿದೆ.
ಸಾಮಾಜಿಕ ಹೋರಾಟಗಾರ, ಕೊಡಗು ಜಿಲ್ಲೆಯ ಮಾಜಿ ಜಿ.ಪಂ. ಸದಸ್ಯ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದ ಗಡಿಭಾಗ ಕುಟ್ಟದ ನಿವಾಸಿ ದಿ.ಮುಕ್ಕಾಟಿರ ಶಿವು ಮಾದಪ್ಪ ಅವರ ಜ್ಞಾಪಕಾರ್ಥವಾಗಿ ಇವರ ಸ್ನೇಹಿತ ಬಳಗ ತಾ. ೧೯ ರಿಂದ (ನಾಳೆಯಿಂದ) ೨೨ ರವರೆಗೆ ೪ ದಿನಗಳ ಕಾಲ ಸ್ಥಳೀಯ ಸರ್ಕಾರಿ ಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದೆ.
ಇದೇ ಮೊದಲ ಬಾರಿಗೆ ಗಡಿಭಾಗ ಕುಟ್ಟದ ಪಟ್ಟಣದಲ್ಲಿ ಕ್ರಿಕೆಟ್ ಹಬ್ಬದ ಸಂಭ್ರಮ ನಡೆಯಲಿದೆ. ಕುಟ್ಟ ಯೂತ್ ಫ್ರೆಂಡ್ಸ್ ವತಿಯಿಂದ ಮೊದಲ ಬಾರಿಗೆ ಈ ಪಂದ್ಯಾವಳಿಯು ನಡೆಯುತ್ತಿದ್ದು ಜಿಲ್ಲೆಯ ಗ್ರಾಮೀಣ ಭಾಗದ ೩೨ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.
ಈಗಾಗಲೇ ಪಂದ್ಯಾವಳಿಗೆ ಬೇಕಾದ ಅಗತ್ಯ ಸಿದ್ಧತೆಗಳು ಆರಂಭಗೊAಡಿದ್ದು ಯುವಕರ ತಂಡ ಪಂದ್ಯಾವಳಿಯ ಯಶಸ್ಸಿಗೆ ಶ್ರಮಿಸುತ್ತಿದೆ. ಅಪಾರ ಸ್ನೇಹಿತ ಬಳಗವನ್ನು ಹೊಂದಿದ್ದ ಮಾಜಿ ಜಿ.ಪಂ ಸದಸ್ಯ ಶಿವು ಮಾದಪ್ಪ ಅವರು ದೈವಾಧೀನರಾದ ಒಂದು ವರ್ಷದ ನಂತರ ಇವರ ಅಭಿಮಾನಿ ಬಳಗ ಕ್ರಿಕೆಟ್ ಪಂದ್ಯಾವಳಿಯನ್ನು ಗ್ರಾಮೀಣ ಭಾಗದಲ್ಲಿ ಆಯೋಜಿಸಲು ನಿರ್ಧಾರ ಕೈಗೊಂಡಿದೆ.
ಕೊಡಗು ಜಿಲ್ಲೆ ಸೇರಿದಂತೆ ನೆರೆಯ ಕೇರಳ ರಾಜ್ಯದ ಎರಡು ತಂಡಗಳು ಸೇರಿ ಒಟ್ಟು ೩೨ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ವಿಜೇತ ತಂಡಕ್ಕೆ ರೂ.
೫೦ ಸಾವಿರ ನಗದು ಬಹುಮಾನ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.೨೫ ಸಾವಿರ ನಗದು, ೩ನೇ ತಂಡಕ್ಕೆ ರೂ.೧೫ ಸಾವಿರ ನಗದು, ೪ನೇ ಸ್ಥಾನ ಪಡೆಯುವ ತಂಡಕ್ಕೆ ರೂ.೧೦ ಸಾವಿರ ನಗದು ಸೇರಿದಂತೆ ಪಾರಿತೋಷಕಗಳನ್ನು ನೀಡಲಾಗುತ್ತದೆ.
ಅಲ್ಲದೆ ಇನ್ನಿತರ ಆಕರ್ಷಕ ಬಹುಮಾನಗಳನ್ನು ಘೋಷಣೆ ಮಾಡಲಾಗಿದೆ. ಈಗಾಗಲೇ ೩೨ ತಂಡಗಳು ನೋಂದಣಿ ಮಾಡಿಕೊಂಡಿದ್ದು ಯುವಕರ ತಂಡ ಪಂದ್ಯಾವಳಿಯ ಯಶಸ್ಸಿಗಾಗಿ ಅಂತಿಮ ಸಿದ್ಧತೆಯಲ್ಲಿದೆ.
- ಹೆಚ್.ಕೆ. ಜಗದೀಶ್