ವೀರಾಜಪೇಟೆ, ಏ. ೧೭: ಕ್ರೀಡೆಯು ಜನರಲ್ಲಿ ಒಗ್ಗಟ್ಟು ಹಾಗೂ ಸ್ಪೂರ್ತಿಯ ಮನೋಭಾವವನ್ನು ಬೆಳೆಸುವಂತಾಗಬೇಕು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಹೇಳಿದರು.

ಹಾಕತ್ತೂರಿನ ಯುವ ಸ್ಪಂದನ ಯೂತ್ ಫೌಂಡೇಶನ್ ವತಿಯಿಂದ ಪ್ರಥಮ ವರ್ಷದ ಯುವ ಸ್ಪಂದನ ಚಾಂಪಿಯನ್ ಟ್ರೋಫಿ-೨೦೨೬ ಕ್ರಿಕೆಟ್ ಪಂದ್ಯಾಟ ಹಾಕತ್ತೂರು ಶಾಲಾ ಮೈದಾನದಲ್ಲಿ ಆಯೋಜಿಸಲಾಗಿತ್ತು.

ಪಂದ್ಯಾಟಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಪಂದ್ಯಾಟವನ್ನು ಬ್ಯಾಟಿಂಗ್ ಮಾಡುವುದರ ಮೂಲಕ ಉದ್ಘಾಟಿಸಿ ಆಟಗಾರರಿಗೆ ಶುಭ ಕೋರಿದ ಶಾಸಕ ಪೊನ್ನಣ್ಣ ಅವರು, ಆಟಗಾರರನ್ನು ಉದ್ದೇಶಿಸಿ ಮಾತನಾಡಿ, ಕೂಡಿ ಬಾಳುವುದು ಹಾಗೂ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಲು ಕ್ರೀಡೆಯು ಅತ್ಯಂತ ಸಹಕಾರಿ. ಕ್ರೀಡೆಯು ಮಾನಸಿಕ ಚೈತನ್ಯ ನೀಡುವುದರೊಂದಿಗೆ ದೈಹಿಕವಾಗಿಯೂ ಯುವಕರಿಗೆ ಸಹಕಾರಿಯಾಗಲಿದೆ. ಕ್ರೀಡೆಯಲ್ಲಿ ಭವಿಷ್ಯವನ್ನು ಕಂಡುಕೊಳ್ಳುವವರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಎಲ್ಲರಿಗೂ ಒಳಿತಾಗಲಿ ಎಂದು ಹಾರೈಸಿದರು.

ಇದೆ ಸಂದರ್ಭದಲ್ಲಿ ರೂ.೨೦ ಲಕ್ಷ ವೆಚ್ಚದ ಅನುದಾನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಅನುಮೋದನೆಗೊಂಡ ಸಂಪಾಜೆ ಹೋಬಳಿ ಹಾಕತ್ತೂರು ಪ್ರಾಥಮಿಕ ಶಾಲೆ ಆಟದ ಮೈದಾನದ ಅಭಿವೃದ್ಧಿ ಕಾಮಗಾರಿಯ ಉದ್ಘಾಟನೆಯನ್ನು ನೆರವೇರಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಪಂದ್ಯಾಟದ ಆಯೋಜಕರಾದ ಚೇತನ್, ಸುನಿಲ್, ಸದಸ್ಯರು, ಪದಾಧಿಕಾರಿಗಳು, ಇಲಾಖೆಯ ಅಧಿಕಾರಿಗಳು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.