ಮಡಿಕೇರಿ, ಏ. ೧೭ : ಕೊಡಗು ಗೌಡ ಯುವ ವೇದಿಕೆಯ ಸಭೆಯು ಅಧ್ಯಕ್ಷ ಬಾಳಾಡಿ ಮನೋಜ್ ನೇತೃತ್ವದಲ್ಲಿ ಮಡಿಕೇರಿಯ ಯುವ ವೇದಿಕೆ ಕಚೇರಿಯಲ್ಲಿ ನಡೆಯಿತು.
ಕೊಡಗು ಗೌಡ ಯುವ ವೇದಿಕೆಯ ೨೭ ನೇ ವರ್ಷದ ೧೦ ಕುಟುಂಬ ೧೮ ಗೋತ್ರದ ಗೌಡ ಜನಾಂಗದ ಕ್ರೀಡಾಕೂಟ ಮಡಿಕೇರಿಯಲ್ಲಿ ಆಯೋಜನೆಗೊಂಡಿದ್ದು ಮೇ. ೧ ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಈ ಹಿನ್ನಲೆಯಲ್ಲಿ ಕ್ರೀಡಾಕೂಟ ಹಾಗೂ ಕಾರ್ಯಕ್ರಮ ಆಯೋಜನೆ ಹಾಗೂ ನಿರ್ವಹಣೆಯ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಬಾಳಾಡಿ ಮನೋಜ್ ಮಾತನಾಡಿ ಈ ಬಾರಿ ನಮ್ಮ ಕ್ರೀಡಾಕೂಟವನ್ನು ಬಹಳ ವಿಭಿನ್ನವಾಗಿ ನಡೆಸಲು ಆಡಳಿತ ಮಂಡಳಿ ತೀರ್ಮಾನ ತೆಗೆದುಕೊಂಡಿದೆ. ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ ೧ ರಿಂದ ೧೬ ರವರೆಗೆ ವಿವಿಧ ಆಟೋಟಗಳು ನಡೆಯಲಿವೆ ಎಂದರು.
ಗೌಡ ಯುವ ವೇದಿಕೆಯ ಕಾರ್ಯದರ್ಶಿ ರಿಶೀತ್ ಮಾದಯ್ಯ ಮಾತನಾಡಿ ಕೊಡಗು ಗೌಡ ಯುವ ವೇದಿಕೆಯ ಕ್ರೀಡಾ ಕೂಟಕ್ಕೆ ದಿನಗಣನೆ ಆರಂಭವಾಗಿದ್ದು ಎಲ್ಲಾ ರೀತಿಯ ತಯಾರಿ ನಡೆಸಲಾಗುತ್ತಿದೆ. ಒಲಿಂಪಿಕ್ ಮಾದರಿಯಲ್ಲಿ ಕ್ರೀಡಾಕೂಟವÀನ್ನು ಆಯೋಜನೆ ಮಾಡುತ್ತಿರುವುದರಿಂದ ಕ್ರೀಡಾಕೂಟಕ್ಕೆ ಮಡಿಕೇರಿ ಹೊರ ವಲಯದ ಗಾಳಿಬೀಡು ಗ್ರಾಮದಿಂದ ಚಾಲನೆ ನೀಡಲಾಗುವುದು. ಕ್ರೀಡಾ ಜ್ಯೋತಿಯೊಂದಿಗೆ ಗಾಳಿಬೀಡಿನ ೧೦ ಐನ್ ಮನೆಗಳಿಗೆ ತೆರಳುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪರಿಚನ ಸತೀಶ್ ಮತ್ತು ಎಡಿಕೇರಿ ಪ್ರಸನ್ನ, ಖಜಾಂಜಿ ನವೀನ್ ದೇರಳ, ಕಾರ್ಯದರ್ಶಿ ಕೆದಂಬಾಡಿ ಕಾಂಚನ ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಹಾಜರಿದ್ದರು.