ಶನಿವಾರಸಂತೆ, ಏ. ೧೭ :: ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಬನದಲ್ಲಿ ಶ್ರೀದೇವಿ-ಗುಳಿಗ ದೈವದ ವಾರ್ಷಿಕ ಪೂಜಾ ಮಹೋತ್ಸವ ಹಾಗೂ ಬಲಿ ಪೂಜೆ ದಿನಗಳ ಶ್ರದ್ಧಾಭಕ್ತಿಯಿಂದ ಜರುಗಿತು.

ಪುರೋಹಿತರಾದ ಸೋಮವಾರಪೇಟೆಯ ಸುರೇಂದ್ರ ಭಟ್ ಹಾಗೂ ತಂಡದವರಿAದ ಶ್ರೀಚಾಮುಂಡೇಶ್ವರಿ ದೇವಿಯ ಆರಾಧನೆ ಗಣಹೋಮ, ದುರ್ಗಾ ಹೋಮ, ನವಕಕಲಶ ಹೋಮ, ಕಲಶ ಪೂಜೆ, ಮಹಾಮಂಗಳಾರತಿ ಬಳಿಕ ತೀರ್ಥಪ್ರಸಾದ ವಿನಿಯೋಗ ಗುಳಿಗ ದೈವದ ಬಲಿ ಪೂಜೆಯು ಸಾಂಪ್ರದಾಯಿಕವಾಗಿ ನಡೆಯಿತು.ಅರ್ಚಕರಾದ ರಾಜೇಶ್ ಕೋಟ್ಯಾನ್, ಸಂತೋಷ್ ಕರ್ಕೇರ ಹಾಗೂ ಪ್ರಕಾಶ್ಚಂದ್ರ ಸುವರ್ಣ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಶನಿವಾರಸಂತೆ ಪಟ್ಟಣ, ತ್ಯಾಗರಾಜ ಕಾಲೋನಿ, ಹಾಗೂ ಸುಳುಗಳಲೆ ಕಾಲೋನಿಯ ಭಕ್ತಾದಿಗಳು ಮಡ್ಲಕ್ಕಿ ಸಮರ್ಪಿಸಿ, ಎಳನೀರ ಅಭಿಷೇಕ, ಹಣ್ಣುಕಾಯಿ ಮಾಡಿಸಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಪೂಜಾ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಬನದ ಜಾಗದ ವಾರಸುದಾರರಾದ ಉಮಾವತಿ ಗಂಗಪ್ಪ ಕರ್ಕೇರ ಕುಟುಂಬಸ್ಥರು ಮತ್ತಿತರರು ಪೂಜಾ ಕಾರ್ಯಕ್ರಮಗಳಲ್ಲಿ ಹಾಜರಿದ್ದರು.