ಸುಂಟಿಕೊಪ್ಪ, ಏ. ೧೭: ರಾಜ್ಯ ಹೆದ್ದಾರಿ ಭೂತನಕಾಡು ಬಳಿಯಲ್ಲಿ ಬೈಕ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸವಾರ ಕೊನೆಯುಸಿರೆಳೆದಿದ್ದಾರೆ.

ತಾ. ೧೬ರ ಅಪರಾಹ್ನ ೩ ಗಂಟೆಯ ಸಂದರ್ಭದಲ್ಲಿ ಚೆಟ್ಟಳ್ಳಿ ಕಡೆಯಿಂದ ಸುಂಟಿಕೊಪ್ಪ ಕಡೆಗೆ ಆಗಮಿಸುತ್ತಿದ್ದ ಮಾರುತಿ ರಿಡ್ಜ್ ಕಾರು ಸುಂಟಿಕೊಪ್ಪ ಕಡೆಯಿಂದ ಚೆಟ್ಟಳ್ಳಿ ಕಡೆಗೆ ತೆರಳುತ್ತಿದ್ದ ಬೈಕ್ ನಡುವೆ ಚೆಟ್ಟಳ್ಳಿ ಸಮೀಪದ ಭೂತನಕಾಡು ಎಂಬಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಇದರಿಂದ ಸುಂಟಿಕೊಪ್ಪ ಸಮೀಪದ ಕಾನ್‌ಬೈಲ್-ಬೈಚನಹಳ್ಳಿ ಗ್ರಾಮದ ನಿವಾಸಿ ಪಡ್ಡಂಬೈಲು ಧನಂಜಯ ಎಂಬವರು ಸಾವನ್ನಪ್ಪಿದ್ದಾರೆ.

ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಚಿಂತಾಜನಕಾರಾಗಿದ್ದ ಧನಂಜಯ ಅವರನ್ನು ಮಡಿಕೇರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭ ಮಾರ್ಗಮಧ್ಯದ ಸುಳ್ಯ ಬಳಿ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ಕಾರು ಚಾಲಕನ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.