ಮಡಿಕೇರಿ, ಏ. ೧೬: ಮಹಿಳೆಯರ ಸಶಕ್ತೀಕರಣಕ್ಕೆ ನಾರಿಶಕ್ತಿ ವಂದನ ಕಾಯಿದೆ ಪೂರಕವಾಗಿದ್ದು, ಇಡೀ ದೇಶದ ಮಹಿಳೆಯರು ಈ ವಿಚಾರವನ್ನು ಸಂಭ್ರಮಿಸಬೇಕೆAದು ಬಿಜೆಪಿ ಮಹಿಳಾ ಮೋರ್ಚಾ ಪ್ರಮುಖರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮಹಿಳಾ ಮೋರ್ಚಾ ಮಾಜಿ ಉಪಾಧ್ಯಕ್ಷೆ, ಬಿಜೆಪಿ ಶಿಸ್ತು ಸಮಿತಿ ಸದಸ್ಯೆ ಪಟ್ಟಡ ರೀನಾ ಪ್ರಕಾಶ್, ನಾರಿಶಕ್ತಿ ವಂದನ ಅಧಿನಿಯಮವನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ತರಲು ಮುಂದಾಗಿದೆ. ಇದಕ್ಕಾಗಿ ೩ ದಿನಗಳ ವಿಶೇಷ ಅಧಿವೇಶನ ನಡೆಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಮಹಿಳೆಯರಿಗೆ ಮತದಾನ ಹಕ್ಕನ್ನು ಇತರೆ ದೇಶಗಳಿಗಿಂತ ಮೊದಲು ನೀಡಿದರೂ ಸಬಲೀಕರಣಕ್ಕೆ ಒತ್ತು ನೀಡಿರಲಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಹತ್ತಾರು ಕಾರ್ಯಕ್ರಮವನ್ನು ರೂಪಿಸಿದರು. ಈ ಕಾಯಿದೆಯಿಂದ ಶೇ ೩೩ ಮೀಸಲಾತಿ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಮಹಿಳೆಯರಿಗೆ ದೊರೆಯಲಿದೆ. ಇದರಿಂದ ಸದೃಢ ಸಮಾಜ ನಿರ್ಮಾಣವೂ ಸಾಧ್ಯವಾಗಿದ್ದು, ಮಹಿಳೆಯರು ರಾಜಕೀಯವಾಗಿಯೂ ಸಾಧನೆ ತೋರಲು ಸಾಧ್ಯವಿದೆ. ಹೊಸ ಕಾಯಿದೆಯಿಂದ ಲೋಕಸಭೆಯಲ್ಲಿ ೨೭೩, ಕರ್ನಾಟಕ ವಿಧಾನಸಭೆಯಲ್ಲಿ ೧೦೨ ಸ್ಥಾನಗಳು ಮಹಿಳೆಯರಿಗೆ ಮೀಸ ಲಾಗಲಿದೆ ಎಂದರು.

ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಮಾತನಾಡಿ, ಅದ್ಭುತ ಚಿಂತನೆಯನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಸಾಕಾರಗೊಳಿಸಿದ್ದಾರೆ. ಸ್ವಚ್ಛ ಭಾರತ್, ಮಾತೃ ವಂದನ, ಉಜ್ವಲ, ನಾರಿಶಕ್ತಿ, ಮಹಿಳಾ ಸಮ್ಮಾನ್, ಬೇಟಿ ಬಚವೋ, ಬೇಟಿ ಪಡವೋ ಹೀಗೆ ಹಲವರು ಕಾರ್ಯಕ್ರಮವನ್ನು ಮಹಿಳೆಯರಿಗಾಗಿ ಕೇಂದ್ರ ಸರಕಾರ ಜಾರಿ ಮಾಡಿದ್ದು, ಹೊಸ ಕಾಯಿದೆ ಮಹಿಳೆಯರಿಗೆ ಹೊಸ ಯುಗದ ಉದಯವಾದಂತಿದೆ. ಕ್ರಾಂತಿಕಾರಿ ಹೆಜ್ಜೆಯಿಟ್ಟಿರುವ ಪ್ರಧಾನಿಗಳಿಗೆ ಅಭಿನಂದಿಸುವ ಸಲುವಾಗಿ ಮಿಸ್ಡ್ ಕಾಲ್ ಅಭಿಯಾನ ಕೈಗೊಳ್ಳಲಾಗಿದೆ. ೯೬೬೭೧೭೩೩೩೩ ಸಂಖ್ಯೆಗೆ ಕರೆ ಮಾಡಿ ತಮ್ಮ ಅಭಿನಂದನೆ ಸಲ್ಲಿಸಬಹುದಾಗಿದೆ. ಇದರೊಂದಿಗೆ ಸಾರ್ವಜನಿಕರಿಂದ ಸಹಿ ಸಂಗ್ರಹ, ಸಮಾವೇಶ, ಜಾಥಾಗಳನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಅಪ್ಪಣ್ಣ, ಪುಷ್ಪ ನಾಗೇಶ್, ನಗರಾಧ್ಯಕ್ಷೆ ಸೌಮ್ಯ ಸುನಿಲ್ ಹಾಜರಿದ್ದರು.