ಸೋಮವಾರಪೇಟೆ, ಏ.೧೫: ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಇಲ್ಲಿನ ಚೆನ್ನಬಸಪ್ಪ ಸಭಾಂಗಣದಲ್ಲಿ ಮಂಗಳವಾರ ಡಾ. ಬಿ.ಆರ್ ಅಂಬೇಡ್ಕರ್ ಅವರ ೧೩೫ನೇ ಜನ್ಮದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಮಡಿಕೇರಿಯ ಸರಸ್ವತಿ ಡಿಎಡ್ ಕಾಲೇಜಿನ ಪ್ರಾಂಶುಪಾಲರಾದ ಕುಮಾರ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಧೀಮಂತ ನಾಯಕ, ಮಹಾನ್ ನಾಯಕ ಎಂದು ಪ್ರಪಂಚದಲ್ಲಿ ಗುರುತಿಸಲ್ಪಟ್ಟಿದ್ದಾರೆ. ೧೯೮ ರಾಷ್ಟçಗಳಲ್ಲಿ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಆಚರಿಸುತ್ತಿರುವುದು ಅವರಿಗೆ ಸಂದ ಗೌರವವಾಗಿದೆ. ಅವರು ಪ್ರಪಂಚಕ್ಕೆ ಜ್ಞಾನವನ್ನು ನೀಡಿದ್ದಾರೆ ಎಂದರು.
ಸಮಾಜದಲ್ಲಿ ಇಂದು ಹೋರಾಟಗಳು ಅತಿಯಾಗುತ್ತಿವೆ. ಅದರ ಲಾಭ ಕೇವಲ ಸ್ವಂತಕ್ಕಾಗಿ ಮಾತ್ರ ಆಗುತ್ತಿದ್ದು, ಅದರಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಮುಖಂಡರು ಇಂತಹ ಹೋರಾಟಕ್ಕೆ ಅವಕಾಶ ಮಾಡಿಕೊಡುವುದು ಬೇಡ. ಯಾವುದೇ ಹೋರಾಟ ಮಾಡಿದ ತಕ್ಷಣ ಅದರ ಲಾಭ ಸಿಗುವುದಿಲ್ಲ. ಅದಕ್ಕೆ ಕಲಾವಕಾಶ ಬೇಕಿದೆ ಎಂದರು.
ಕಾರ್ಯಕ್ರಮವನ್ನು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಉದ್ಘಾಟಿಸಿದರು. ನಂತರ ಮಾತನಾಡಿ, ಅಂಬೇಡ್ಕರ್ ಅವರ ಜೀವನ ಚರಿತ್ರೆಗಾಗಿ ಅವರಿಗೆ ಸಂಬAಧಪಟ್ಟ ಪುಸ್ತಕಗಳನ್ನು ಓದಬೇಕು. ಅಂಬೇಡ್ಕರ್ ಜಯಂತಿ ಮಾಡುವ ಮೂಲಕ ಅವರನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ಜೀವನಪೂರ್ತಿ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಮನುಷ್ಯರಾಗಿ ಬದುಕಲು ಎಲ್ಲರೂ ಮುಂದಾಗಬೇಕೆAದರು.
ವೇದಿಕೆಯಲ್ಲಿ ಸೂಡ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎ ಅದಮ್, ಕೆಡಿಪಿ ಸದಸ್ಯ ವೇದಕುಮಾರ್, ಪ್ರಮುಖರಾದ ಜಯಪ್ಪ ಹಾನಗಲ್ಲು, ಬಿ.ಈ. ಜಯೇಂದ್ರ, ಹೊನ್ನಪ್ಪ, ಜಾನಕಿ ವೆಂಕಟೇಶ್, ಮೋಹಿನಿ, ತಾಲೂಕು ಪಂಚಾಯಿತಿ ಇಒ ಪರಮೇಶ ಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ರೇಂಜರ್ ಶೈಲೇಂದ್ರ, ಇನ್ಸ್ಪೆಕ್ಟರ್ ಮುದ್ದುಮಹದೇವ, ಬಿಇಒ ಕೃಷ್ಣಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಬಾಣವಾರ ರಸ್ತೆಯಲ್ಲಿ ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನಂತರ, ಮೆರವಣಿಗೆಯ ಮೂಲಕ ಚೆನ್ನಬಸಪ್ಪ ಸಭಾಂಗಣಕ್ಕೆ ಬರಲಾಯಿತು.