ಕೂಡಿಗೆ. ಏ.೧೫: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ ಬಿ.ಆರ್ ಅಂಬೇಡ್ಕರ್ ಅವರು ಕೇವಲ ಒಬ್ಬ ವ್ಯಕ್ತಿಯಾಗಿರದೆ, ಇಡೀ ಸಮಾಜದ ಶಕ್ತಿಯಾಗಿದ್ದರು. ಅವರ ಶಿಕ್ಷಣ, ಸಂಘಟನೆ, ಹೋರಾಟ ಎಲ್ಲರಿಗೂ ಮಾದರಿಯಾದುದು ಎಂದು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ ಪ್ರೇಮಕುಮಾರ್ ಹೇಳಿದರು.

ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಸಂಘ, ರಾಷ್ಟಿçÃಯ ಸೇವಾ ಯೋಜನೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಶಾಲಾ ಘಟಕದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ‘ಭಾರತ ಭಾಗ್ಯ ವಿಧಾತ’ ವಿಶ್ವಜ್ಞಾನಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂವಿಧಾನ ಪೀಠಿಕೆಯನ್ನು ಬೋಧಿಸಿ ಭಾರತೀಯ ಸಂವಿಧಾನದ ಮಹತ್ವ ಕುರಿತು ಮಾತನಾಡಿದರು.

ಡಾ ಅಂಬೇಡ್ಕರ್ ರಂತಹ ಮಹಾನ್ ಪುರುಷರ ವೈಚಾರಿಕ ಚಿಂತನೆಗಳು ಶೋಷಿತರಿಗೆ ಪ್ರೇರಣೆ, ಸ್ಪೂರ್ತಿಯಾಗಬೇಕೆಂಬ ನೆಲೆಗಟ್ಟಿನಲ್ಲಿ ಇಂತಹ ಜಯಂತಿಗಳನ್ನು ಆಚರಿಸಲಾಗುತ್ತಿದೆ ಎಂದು ಪ್ರೇಮಕುಮಾರ್ ತಿಳಿಸಿದರು.

ಶಿಕ್ಷಣ-ಸಂಘಟನೆ-ಹೋರಾಟ ಎನ್ನುವುದು ಅಂಬೇಡ್ಕರ್ ಅವರು ಶೋಷಿತ, ಹಿಂದುಳಿದ ಜಾತಿ ಸಮುದಾಯಗಳಿಗೆ ಕೊಟ್ಟ ಮಂತ್ರವಾಗಿದೆ. ಈ ಮೂರೂ ಮಂತ್ರಗಳ ಮೂಲಕ ಶೋಷಿತ ಜಾತಿ ಸಮುದಾಯಗಳು ಶಿಕ್ಷಣ ಪಡೆದು ದೊಡ್ಡ ಸಂಘಟನೆ ಮಾಡಿಕೊಳ್ಳುವ ಮೂಲಕ ಹೋರಾಟದ ಹಾದಿಯಲ್ಲಿ ತಮ್ಮ ಹಕ್ಕು ಮತ್ತು ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ಡಾ ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ್ದರು ಎಂದು ಅವರು ಹೇಳಿದರು. ಅಂಬೇಡ್ಕರ್ ಅವರ ಘೋಷಣೆಗಳಾದ ಶಿಕ್ಷಣ, ಸಂಘಟನೆ, ಹೋರಾಟ ಗುಣಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ತಿಳಿದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಡಾ ಬಿ.ಆರ್.ಅಂಬೇಡ್ಕರ್ ಅವರ ಬದುಕು ಮತ್ತು ಬರಹದ ಕುರಿತು ಮಾಹಿತಿ ನೀಡಿದ ಶಾಲಾ ಸಮಾಜ ವಿಜ್ಞಾನ ಶಿಕ್ಷಕಿ ಎಸ್.ಎಂ ಗೀತಾ, ಜಾತಿ ವ್ಯವಸ್ಥೆಯಿಂದ ಅನ್ಯಾಯ, ಅಪಮಾನ, ಶೋಷಣೆಗೆ ಒಳಪಟ್ಟ ಎಲ್ಲ ಜನಾಂಗಗಳವರು ಸಂಘಟಿತರಾಗಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟವನ್ನು ಮೂಲಮಂತ್ರವಾಗಿಸಿಕೊಳ್ಳಬೇಕು ಎಂದು ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸುವ ಮೂಲಕ ಶೋಷಿತರ ಪರವಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದ್ದರು. ಪ್ರತಿಯೊಬ್ಬರೂ ಸ್ವಾಭಿಮಾನಿಗಳಾಗಲು ಶಿಕ್ಷಣ ಬಹಳ ಮುಖ್ಯ ಎಂದರು.

ಶಾಲಾ ಎಸ್.ಡಿ.ಎಂ.ಸಿ ಸಲಹಾ ಸಮಿತಿಯ ಸದಸ್ಯ ಕೆ.ಎಸ್.ರಾಜಾಚಾರಿ, ಶಾಲಾ ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಬಿ.ಎನ್.ಸುಜಾತ, ಬಿ.ಎಸ್.ಅನ್ಸಿಲಾ ರೇಖಾ, ಗೈಡ್ಸ್ ಶಿಕ್ಷಕಿ ಕೆ.ಟಿ.ಸೌಮ್ಯ, ಹಿರಿಯ ವಿದ್ಯಾರ್ಥಿ ರತೀಶ್, ವಿದ್ಯಾರ್ಥಿಗಳು ಇದ್ದರು.

ಇದೇ ವೇಳೆ ಡಾ ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಣೆ ಮಾಡಲಾಯಿತು.