ಶನಿವಾರಸಂತೆ, ಏ. ೧೫: ಹೊಳೆನರಸೀಪುರ ಪಡವಲಹಿಪ್ಪೆ ಶ್ರೀ ಹೆಚ್.ಡಿ. ದೇವೇಗೌಡ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಮಾಲಂಬಿ ಮಹರ್ಷಿ ವಾಲ್ಮೀಕಿ ಬುಡಕಟ್ಟು ವಸತಿ ಶಾಲಾ ಆವರಣದಲ್ಲಿ ೧೦ ದಿನ ಹಮ್ಮಿಕೊಂಡಿದ್ದ ಸಮಾಜ ಸೇವಾ ಶಿಬಿರ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.
ಕಾಲೇಜು ಪ್ರಾಧ್ಯಾಪಕ ಡಾ. ಭುವನೇಂದ್ರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸಮಾಜ ಸೇವಾ ಶಿಬಿರ ಆಯೋಜನೆ ಮಾಡುವ ಮೂಲಕ ಶಿಬಿರಾರ್ಥಿಗಳು ಜನರ ಮನಗೆದ್ದಿದ್ದಾರೆ. ಇಂದು ಪೋಷಕರು ಪ್ರತಿಷ್ಠೆಗಾಗಿ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸದೇ ಇರುವುದು ದುರಂತ. ಇಂದು ಅನೇಕ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಸರಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಜಾಗೃತಗೊಳ್ಳಬೇಕು. ಓದುವ ಮಕ್ಕಳು ಯಾವುದೇ ಶಾಲೆಯಲ್ಲಾದರೂ ಓದಿ ಸಾಧನೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಗುರು ಹಿರಿಯರನ್ನು ಗೌರವಿಸಬೇಕು. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯ ಎಸೆಯಬಾರದು. ಕೊಡಗಿನಲ್ಲಿ ತ್ಯಾಜ್ಯ ಎಸೆಯದಂತೆ ಸಾರ್ವಜನಿಕರು ವಿಶೇಷ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು.
ಶಿಬಿರ ಸಂಯೋಜಕ ಡಾ. ಹೆಚ್.ಎನ್. ದೀಪು ಮಾತನಾಡಿ, ಗ್ರಾಮೀಣ ಪ್ರದೇಶದ ವಸ್ತುಸ್ಥಿತಿ ಅರಿತುಕೊಳ್ಳಲು ವಿದ್ಯಾರ್ಥಿಗಳಿಗೆ ಶಿಬಿರ ಸಹಕಾರಿಯಾಗಿದೆ ಎಂದರು.
ಸಹಾಯಕ ಪ್ರಾಧ್ಯಾಪಕರು ಗಳಾದ ವೆಂಕಟೇಶ್ ರೇಖಾಶ್ರೀ ಮಾತನಾಡಿದರು. ಗ್ರಾಮಸ್ಥರ ಪರವಾಗಿ ಶಿಬಿರ ಸಂಯೋಜಕರಾದ ದೀಪು, ವೆಂಕಟೇಶ್, ರೇಖಾಶ್ರೀ ಅವರುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಆಲೂರು ಸಿದ್ದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಮಾಲಂಬಿ ವಾಲ್ಮೀಕಿ ಆಶ್ರಮ ಶಾಲಾ ಮುಖ್ಯ ಶಿಕ್ಷಕ ಆನಂದ್, ಶಿಕ್ಷಕ ವಿಜೇಂದ್ರ, ಹಾರೆಹೊಸೂರು ಸರ್ಕಾರಿ ಶಾಲಾ ಶಿಕ್ಷಕ ಯಶವಂತ್, ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಮುತ್ತಮ್ಮ ಮುಂತಾದವರಿದ್ದರು.