ಕುಶಾಲನಗರ, ಏ.೧೫: ಕುಶಾಲನಗರ ಹೆದ್ದಾರಿ ರಸ್ತೆಗಳಲ್ಲಿ ಸಾಗುವ ಸಂದರ್ಭ ಜಲ್ಲಿ ಮತ್ತಿತರ ಕಟ್ಟಡ ಸಾಮಗ್ರಿಗಳನ್ನು ರಸ್ತೆಯಲ್ಲಿ ಚೆಲ್ಲಾಡಿಕೊಂಡು ಇತರ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕುಶಾಲನಗರ ಸಂಚಾರಿ ಪೊಲೀಸರು ಮಂಗಳವಾರ ಬೆಳಿಗ್ಗೆ ವಾಹನಗಳ ತಪಾಸಣೆ ಕಾರ್ಯಾಚರಣೆ ನಡೆಸಿ, ನಿಯಮ ಉಲ್ಲಂಘಿಸಿ ಸಾಗುವ ವಾಹನಗಳನ್ನು ವಶಪಡಿಸಿ ಕ್ರಮ ಕೈಗೊಂಡಿದ್ದಾರೆ.

ಕೂಡಿಗೆಯಿಂದ ಕುಶಾಲನಗರ ಮೂಲಕ ಮಡಿಕೇರಿ, ಪಿರಿಯಾಪಟ್ಟಣ ಕಡೆಗೆ ಹೆದ್ದಾರಿ ರಸ್ತೆಯಲ್ಲಿ ತೆರಳುತ್ತಿದ್ದ ಲಾರಿಗಳು, ಟಿಪ್ಪರ್‌ಗಳು ಕ್ರಷರ್‌ಗಳಿಂದ ಮಿತಿಗಿಂತ ಅಧಿಕ ಪ್ರಮಾಣದ ಜಲ್ಲಿ ತುಂಬಿ ಸಾಗುವ ವೇಳೆ ರಸ್ತೆಯಲ್ಲಿ ಬೀಳುವ ಕಾರಣ ದ್ವಿಚಕ್ರ ವಾಹನಗಳು ಅವಘಡಕ್ಕೆ ಈಡಾಗುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಸೂಚನೆಯಂತೆ ಸಂಚಾರಿ ಪೊಲೀಸ್ ಠಾಣಾಧಿಕಾರಿ ಗಣೇಶ್ ಮತ್ತು ಸಿಬ್ಬಂದಿಗಳು ಮಂಗಳವಾರ ಬೆಳಿಗ್ಗೆ ೫ ಗಂಟೆಯಿAದ ಜಲ್ಲಿ ಸಾಗಿಸುತ್ತಿದ್ದ ವಾಹನಗಳನ್ನು ತಪಾಸಣೆಗೆ ಒಳಪಡಿಸಿದ್ದು, ನಿಯಮ ಉಲ್ಲಂಘಿಸಿ ಸಾಗುತ್ತಿದ್ದ ಮೂರು ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.