ಕೋವರ್‌ಕೊಲ್ಲಿ ಇಂದ್ರೇಶ್
ಬೆAಗಳೂರು, ಏ. ೧೫: ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಫಾರಿಗಳ ಮೇಲೆ ತಕ್ಷಣದ ನಿಷೇಧ ಹೇರಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಹುಲಿಗಳ ಆವಾಸಸ್ಥಾನಗಳಲ್ಲಿ ಹುಲಿ ಸಫಾರಿಗಳ ಮೇಲೆ ಶಾಶ್ವತ ನಿಷೇಧ ಹೇರುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಉತ್ತರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ನೇತೃತ್ವದ ಪೀಠವು ಕೋರ್, ಬಫರ್ ಮತ್ತು ಪ್ರವಾಸೋದ್ಯಮ ವಲಯಗಳ ಗಡಿರೇಖೆ, ಸಫಾರಿಗಳನ್ನು ನಡೆಸುತ್ತಿರುವ ನಿಖರವಾದ ಸ್ಥಳಗಳು ಮತ್ತು ಈ ವಲಯಗಳನ್ನು ಸೂಚಿಸುವ ನಕ್ಷೆಗಳನ್ನು ಸ್ಪಷ್ಟಪಡಿಸುವ ವಿವರವಾದ ಅಫಿಡವಿಟ್ ಅನ್ನು ನೀಡಲು ಸೂಚಿಸಿದೆ.
ಹುಲಿ ಸಫಾರಿಗಳ ಮೇಲೆ ನಿಷೇಧ ಹೇರುವಂತೆ ಕೋರಿ ಮೈಸೂರು ನಿವಾಸಿ ವಿ. ರವಿಕುಮಾರ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ನ ವಿಚಾರಣೆ ನಡೆಸಿತು. ಅರ್ಜಿದಾರರು ಟಿ.ಎನ್. ಗೋದವರ್ಮನ್ ತಿರುಮುಲ್ಪಾಡ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪನ್ನು ಉಲ್ಲೇಖಿಸಿದ್ದು ಇದು ಭಾರತದಲ್ಲಿ ಅರಣ್ಯ ರಕ್ಷಣೆ ಮತ್ತು ವನ್ಯಜೀವಿ ನಿರ್ವಹಣೆಗೆ ಸೂಕ್ತ ನಿಯಮಗಳನ್ನು ರೂಪಿಸಿದೆ.
ಬಂಡೀಪುರ ಮತ್ತು ನಾಗರಹೊಳೆ ಸೇರಿದಂತೆ ಹುಲಿ ಮೀಸಲು ಪ್ರದೇಶಗಳಿಗೆ ಸಂಬAಧಿಸಿದAತೆ ಕಳೆದ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಮಾನವ-ವನ್ಯಜೀವಿ ಸಂಘರ್ಷದ ಹಲವಾರು ಘಟನೆಗಳು ವರದಿಯಾದ ನಂತರ ಅಲ್ಲಿ ಸಫಾರಿ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ತರುವಾಯ, ತಾಂತ್ರಿಕ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ, ಅಧಿಕಾರಿಗಳು ೫೦% ಸಾಮರ್ಥ್ಯದಲ್ಲಿ ಸಫಾರಿಗಳನ್ನು ಹಂತಹAತವಾಗಿ ಪುನರಾರಂಭಿಸಲು ಅನುಮತಿ ನೀಡಿದರು.
ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು ಈಗ ನಡೆಯುತ್ತಿರುವ ಸಫಾರಿ ಕಾರ್ಯಾಚರಣೆಗಳು ಸಂರಕ್ಷಣಾ ಮಾನದಂಡಗಳನ್ನು ಉಲ್ಲಂಘಿಸುತ್ತವೆ ಎಂದು ವಾದಿಸಿದರು. “ಸಫಾರಿಗಳನ್ನು ಪ್ರಮುಖ (ನಿರ್ಣಾಯಕ) ಹುಲಿ ಆವಾಸಸ್ಥಾನಗಳಲ್ಲಿ ನಡೆಸಲಾಗುತ್ತಿದೆ, ಅಲ್ಲಿ ಅಂತಹ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಸಫಾರಿಗಳನ್ನು ಪುನರಾರಂಭಿಸುವ ನಿರ್ಧಾರವು ರಾಜಕೀಯ ಮತ್ತು ವಾಣಿಜ್ಯ ಒತ್ತಡಗಳಿಂದ ಪ್ರಭಾವಿತವಾಗಿದೆ. ಮುಂದುವರಿದ ಸಫಾರಿ ಕಾರ್ಯಾಚರಣೆಗಳು ಮಾನವ-ಪ್ರಾಣಿ ಸಂಘರ್ಷಗಳನ್ನು ಇನ್ನಷ್ಟು ಹದಗೆಡಿಸಬಹುದು ಎಂದೂ ವಾದಿಸಿದ ವಕೀಲರು ಕೂಡಲೇ ತಡೆ ನೀಡುವಂತೆ ಕೋರಿದರು.
ಆದರೆ ನ್ಯಾಯಾಲಯವು ಈ ಆರೋಪಗಳ ವಾಸ್ತವಿಕ ಅಡಿಪಾಯವನ್ನು ಪ್ರಶ್ನಿಸಿತು, ನಿರ್ಣಾಯಕ ಹುಲಿ ಆವಾಸಸ್ಥಾನವು ಯಾವಾಗಲೂ ಕೋರ್ ವಲಯದಂತೆಯೇ ಇರುವುದಿಲ್ಲ ಮತ್ತು ವರ್ಗೀಕರಣವನ್ನು ಸರಿಯಾಗಿ ಪರಿಶೀಲಿಸಬೇಕು ಎಂದು ಹೇಳಿತು. ಹುಲಿ ಮೀಸಲು ಪ್ರದೇಶಗಳನ್ನು ಸಾಮಾನ್ಯವಾಗಿ ಕೋರ್, ಬಫರ್ ಮತ್ತು ಪ್ರವಾಸೋದ್ಯಮ ವಲಯಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದರಲ್ಲೂ ಅನುಮತಿಸಲಾದ ಚಟುವಟಿಕೆಗಳ ವಿಭಿನ್ನ ವರ್ಗಗಳಿವೆ ಎಂದು ನ್ಯಾಯಾಲಯವು ಗಮನಿಸಿತು. ಸಫಾರಿಗಳನ್ನು ಸಾಮಾನ್ಯವಾಗಿ ಬಫರ್ ಅಥವಾ ಗೊತ್ತುಪಡಿಸಿದ ಪ್ರವಾಸೋದ್ಯಮ ವಲಯಗಳಲ್ಲಿ ಮಾತ್ರ ಅನುಮತಿಸಲಾಗುತ್ತದೆ ಮತ್ತು ಕಟ್ಟುನಿಟ್ಟಾಗಿ ಸಂರಕ್ಷಿತ ಕೋರ್ ಪ್ರದೇಶಗಳಲ್ಲಿ ಅಲ್ಲ ಎಂದು ಅದು ಹೇಳಿತು.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ನಿರ್ಣಾಯಕ ಆವಾಸಸ್ಥಾನಗಳು ಮತ್ತು ಹುಲಿ ಕಾರಿಡಾರ್‌ಗಳನ್ನು ಸಂರಕ್ಷಿಸುವಾಗ ಅರಣ್ಯೇತರ ಅಥವಾ ಬಫರ್ ವಲಯಗಳೊಳಗಿನ ಭೂಮಿಯಲ್ಲಿ ಸಫಾರಿಗಳನ್ನು ನಡೆಸಬೇಕು ಎಂಬ ನಿಯಮವನ್ನು ಪೀಠ ಗಮನಿಸಿ ವಿಸೃತ ಉತ್ತರ ನೀಡಲು ರಾಜ್ಯಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.