ಮಡಿಕೇರಿ, ಏ. ೧೫: ನಗರದಲ್ಲಿ ನಿರ್ಮಾಣಗೊಂಡಿರುವ ಗ್ರೇಟರ್ ರಾಜಾಸೀಟ್ ಕಾಮಗಾರಿಯಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂದು ಕೊಡಗು ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ ಸಲ್ಲಿಸಿದ ದೂರನ್ನು ಪುರಸ್ಕರಿಸಿರುವ ರಾಜ್ಯ ಸರ್ಕಾರ ಕರ್ನಾಟಕದ ರಾಜ್ಯಪಾಲರ ಆಜ್ಞಾನುಸಾರ ಕರ್ತವ್ಯ ಲೋಪ ಎಸಗಿದ ಅಧಿಕಾರಿಯನ್ನು ಉಪಲೋಕಾಯುಕ್ತರಿಂದ ವಿಚಾರಣೆ ನಡೆಸುವಂತೆ ತೀರ್ಮಾನಿಸಿ ಆದೇಶ ಹೊರಡಿಸಿದೆ.
೨೦೨೩ ಮಾರ್ಚ್ ೧೮ ರಂದು ಅಂದಿನ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ೪.೫ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಗ್ರೇಟರ್ ರಾಜಾಸೀಟ್‌ನ್ನು ಲೋಕಾರ್ಪಣೆಗೊಳಿಸಿದ್ದರು. ಇದಾದ ಒಂದು ವಾರದಲ್ಲಿ ಗ್ರೇಟರ್ ರಾಜಾಸೀಟ್ ಅಪೂರ್ಣ ಕಾಮಗಾರಿಯಾಗಿದೆ ಹಾಗೂ ಕಾಮಗಾರಿಯಲ್ಲಿ ಅಕ್ರಮ ನಡೆಸಲಾಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಲೋಕಾಯುಕ್ತದಲ್ಲಿ ದಾಖಲೆ ಮತ್ತು ಪ್ರಮಾಣ ಪತ್ರದೊಂದಿಗೆ ದೂರು ಸಲ್ಲಿಸಿದ್ದರು. ನಂತರ ಲೋಕಾಯುಕ್ತ ಸಂಸ್ಥೆ ಎಲ್ಲಾ ಆಯಾಮಗಳಲ್ಲಿ ಸಮಗ್ರ ತನಿಖೆ ನಡೆಸಿ ದಿನಾಂಕ ೫-೨-೨೦೨೬ ರಂದು ವರದಿ ಸಲ್ಲಿಸಿ ಕಾಮಗಾರಿಯ ಉಸ್ತುವಾರಿ ಹೊತ್ತಿದ್ದ ಕಿರಿಯ ಇಂಜಿನಿಯರ್ ಕೆ.ಎಲ್.ದೇವರಾಜು ಕರ್ತವ್ಯಲೋಪ ಹಾಗೂ ಹಣದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಉಲ್ಲೇಖಿಸಿ ಶಿಫಾರಸ್ಸು ಮಾಡಿದ್ದರು. ಶಿಫಾರಸ್ಸು ವರದಿಯನ್ನು ಪುರಸ್ಕರಿಸಿರುವ ಕರ್ನಾಟಕ ರಾಜ್ಯ ಸರ್ಕಾರ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಶ್ರೀ ಕೆ.ಎಲ್.ದೇವರಾಜು ಈ ಹಿಂದೆ ಮಡಿಕೇರಿ ಉಪವಿಭಾಗದಲ್ಲಿ ಎಸಗಿದ್ದಾರೆ ಎನ್ನಲಾದ ಕರ್ತವ್ಯ ಲೋಪ ಹಾಗೂ ಹಣ ದುರುಪಯೋಗಕ್ಕೆ ಸಂಬAಧಿಸಿದAತೆ ಅವರ ವಿರುದ್ಧ ವಿಚಾರಣೆಗೆ ಒಳಪಡಿಸಲು ಪ್ರಕರಣವನ್ನು ಕರ್ನಾಟಕ ನಾಗರಿಕ ಸೇವಾ (ವನಿಮೇ)ನಿಯಮ ೧೯೫೭ರ ನಿಯಮ-೧೪ (ಎ) ರನ್ವಯ ಪ್ರಕರಣವನ್ನು ಉಪಲೋಕಾಯುಕ್ತರವರಿಗೆ ವಹಿಸಿ ಆದೇಶಿಸಿದೆ ಎಂದು ಆದೇಶವನ್ನು ಸರ್ಕಾರದ ಅಧೀನ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ ರವರು ಕರ್ನಾಟಕ ಸರ್ಕಾರದ ರಾಜ್ಯಪಾಲರ ಆದೇಶ ಅನುಸಾರ ಮತ್ತು ಅವರ ಹೆಸರಿನಲ್ಲಿ ಹೊರಡಿಸಿದ್ದಾರೆ.