ಸಿದ್ದಾಪುರ, ಏ. ೧೫: ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂದಲೆ ನಡೆಸುತ್ತಿದ್ದ ೧೧ಕ್ಕೂ ಅಧಿಕ ಕಾಡಾನೆಗಳನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಕುಶಾಲನಗರ ಅರಣ್ಯ ವ್ಯಾಪ್ತಿಗೊಳಪಡುವ ಮೀನುಕೊಲ್ಲಿ ಶಾಖೆಯ ನೆಲ್ಲಿಹುದಿಕೇರಿ ಗ್ರಾಮ ಮತ್ತು ಅರೆಕಾಡು ಗ್ರಾಮದ ಕಾಟಿಬಾಣೆ, ಅತ್ತೂರು, ಆನೆಕಾಡು ಭಾಗಗಳ ಕಾಫಿ ತೋಟಗಳಲ್ಲಿ ಬಿಡು ಬಿಟ್ಟು ದಾಂದಲೆ ನಡೆಸುತ್ತಿದ್ದ ಹಾಗೂ ಕೃಷಿ ಪಸಲುಗಳನ್ನು ನಾಶಗೊಳಿಸುತ್ತಿದ್ದ ಕಾಡಾನೆಗಳನ್ನು ಕಾಡಿಗೆ ಅಟ್ಟುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಸೋಮವಾರಪೇಟೆ ತಾಲೂಕು ಎ.ಸಿ.ಎಫ್. ಗೋಪಾಲ್ ಮತ್ತು ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್ ಅವರ ಮಾರ್ಗದರ್ಶನದಲ್ಲಿ ಮೀನುಕೊಲ್ಲಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಸಚಿನ್ ನಿಂಬಾಳ್ಕರ್ ಅವರ ನೇತೃತ್ವದಲ್ಲಿ ಸುಮಾರು ೩೦ ಮಂದಿ ಕಾರ್ಯಾಚರಣೆ ನಡೆಸಿದರು.
ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ೫ ಮರಿಯಾನೆಗಳು ಸೇರಿದಂತೆ ೧೧ಕ್ಕೂ ಅಧಿಕ ಕಾಡಾನೆಗಳು ಕಂಡುಬAದಿತು ಎಂದು ಕಾರ್ಯಾಚರಣೆ ತಂಡದ ಅಧಿಕಾರಿ ಮಾಹಿತಿ ನೀಡಿದ್ದಾರೆ. ಈ ಕಾಡಾನೆಗಳನ್ನು ಕಾಡಿಗಟ್ಟಲು ಸಾಕಷ್ಟು ಪ್ರಯತ್ನ ಮಾಡಿದರು ಕೂಡ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಲಗ್ಗೆ ಇಡುತ್ತ ಕಾರ್ಯಾಚರಣೆ ತಂಡವನ್ನು ಸುತ್ತಾಡಿಸಿದವು. ಸುಡು ಬಿಸಿಲಿನ ನಡುವೆ ಕಾರ್ಯಾಚರಣೆ ತಂಡವು ಶ್ರಮಪಟ್ಟು ಕಾರ್ಯಾಚರಣೆ ನಡೆಸಿ ಮಾಲ್ದಾರೆಯ ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾದರು.
ಕಾರ್ಯಾಚರಣೆಯಲ್ಲಿ ವನಪಾಲಕ ನಾಗರಾಜ್ ರಡರಟ್ಟಿ, ತಿಲಕ್, ಸಾಗರ, ಚಂದ್ರಶೇಖರ್, ಆಶಿಕ್, ಜಗದೀಶ್, ಗಗನ್, ಸುಮಂತ, ಸಂಜು, ನವೀನ, ಪ್ರದೀಪ, ಪ್ರಸಾದ್, ಸುನಿಲ್, ಜೀವನ್, ಪ್ರತಾಪ್, ವಚನ, ನಿಖಿಲ್, ನಾಗರಾಜ್ ಹಾಗೂ ವಾಹನ ಚಾಲಕ ವಾಸುದೇವ ಮತ್ತು ಆನೆ ಕಾರ್ಯಪಡೆ, ಆರ್ಆರ್ಟಿ. ತಂಡದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.