ಸೋಮವಾರಪೇಟೆ, ಏ. ೧೪: ವಿದ್ಯಾರ್ಥಿ ದಿಸೆಯಲ್ಲಿಯೇ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು. ಯುವಶಕ್ತಿಯು ಸರಿಯಾದ ರೀತಿಯಲ್ಲಿ ಬಳಕೆಯಾದರೆ ಮಹತ್ತರ ಕಾರ್ಯ ಸಾಧಿಸಬಹುದು ಎಂದು ಉದ್ಯಮಿ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ಸದಸ್ಯರೂ ಆದ ಮಹೇಶ್ ಗುರಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಯಡೂರಿನ ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಯಡೂರು ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ರಾಷ್ಟಿçÃಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಹರ್ಷ ಬಿ.ಡಿ. ಮಾತನಾಡಿ, ಸೇವೆ ಮಾಡಲು ಎನ್.ಎಸ್.ಎಸ್. ಒಂದು ಸದವಕಾಶ ಕಲ್ಪಿಸುತ್ತದೆ. ಜೀವನ ಮೌಲ್ಯಗಳನ್ನು ರೂಢಿಸಿಕೊಂಡು ಮುಂದೆ ಬರಲು ಉತ್ತಮ ವೇದಿಕೆ ಇದಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಸುಶೀಲ ಹಾನಗಲ್ ಹಾಗೂ ದಳವಾಯಿ ರಾಜು ಉಪಸ್ಥಿತರಿದ್ದರು. ಕಾಲೇಜಿನ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಎಂ.ಎಸ್.ಶಿವಮೂರ್ತಿ, ಕಾಲೇಜಿನ ಐ.ಕ್ಯು.ಎ.ಸಿ. ಸಂಚಾಲಕಿ ಎಂ.ಎA.ಸುನೀತ, ಪ್ರಾಧ್ಯಾಪಕರುಗಳಾದ ಪಿ.ಪಾವನಿ, ಹುಚ್ಚೇಗೌಡ ಎಚ್., ವಿನೋದ ಬಿ.ಎಸ್., ಗುರುಪ್ರಸಾದ್, ಆದಿಲ್, ಪದ್ಮಾವತಿ, ರಾಜಾ ನಾಯಕ್, ಸಿಬ್ಬಂದಿಗಳಾದ ಹೆಚ್.ಜೆ. ಜವರಪ್ಪ ದಿವ್ಯ, ಸಂಧ್ಯಾ ಇದ್ದರು.