ಸೋಮವಾರಪೇಟೆ, ಏ. ೧೪: 'ನಾವು' ಪ್ರತಿಷ್ಠಾನ ಮತ್ತು ಗುಡ್‌ಮೈಂಡ್ಸ್ ವತಿಯಿಂದ ಪಟ್ಟಣದ ಮಹಿಳಾ ಸಮಾಜದಲ್ಲಿ ಮಕ್ಕಳ ಬಾಲ್ಯ ಕಟ್ಟುವ ಹಬ್ಬ ಹೆಸರಿನ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಸುಮನ ಅವರು ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳ ಸಮಗ್ರ ಬೆಳವಣಿಗೆಗೆ ಹಕ್ಕುಗಳ ಮಹತ್ವವನ್ನು ಪೋಷಕರು ಅರಿತುಕೊಳ್ಳಬೇಕು. ಮಕ್ಕಳು ಸಮಾಜದಲ್ಲಿ ಸುರಕ್ಷಿತವಾಗಿರಲು ಪ್ರತಿಯೊಬ್ಬರೂ ಜವಾಬ್ದಾರಿ ವಹಿಸಿಕೊಳ್ಳಬೇಕು. ಪ್ರತಿಯೊಬ್ಬ ಮಗುವಿಗೂ ಶಿಕ್ಷಣ, ಆರೋಗ್ಯ, ಸುರಕ್ಷತೆ ಮತ್ತು ಪ್ರೀತಿಯಿಂದ ಬೆಳೆಯುವ ಹಕ್ಕುಗಳಿವೆ ಎಂದು ಹೇಳಿದರು.
ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಎಚ್.ಆರ್.ಜೀವಿತ ಚಿತ್ರಕಲೆ ಮತ್ತು ಕ್ರಾಫ್ಟ್ ಕುರಿತಾಗಿ ತಿಳಿಸಿದರು. ಮಕ್ಕಳ ಸೃಜನಾತ್ಮಕತೆಯನ್ನು ಉತ್ತೇಜಿಸುವ ವಿವಿಧ ಚಿತ್ರಕಲೆ ತಂತ್ರಗಳು, ಬಣ್ಣಗಳ ಬಳಕೆ ಹಾಗೂ ಕಾಗದ ಸಾಮಗ್ರಿಗಳಿಂದ ಕ್ರಾಫ್ಟ್ ತಯಾರಿಸುವ ವಿಧಾನಗಳನ್ನು ವಿವರಿಸಿದರು. ಮಕ್ಕಳಲ್ಲಿ ಕಲಾತ್ಮಕ ಆಸಕ್ತಿ ಬೆಳೆಸುವ ಜೊತೆಗೆ ಅವರ ಕಲ್ಪನಾಶಕ್ತಿಯನ್ನು ವೃದ್ಧಿಸುವುದು ಮುಖ್ಯವೆಂದು ತಿಳಿಸಿದರು. ಉಪನ್ಯಾಸದ ಬಳಿಕ ವಿದ್ಯಾರ್ಥಿಗಳು ಕ್ರಾಫ್ಟ್ ನಿರ್ಮಾಣದಲ್ಲಿ ತೊಡಗಿಸಿಕೊಂಡರು.
ನಾವು ಸಂಸ್ಥೆಯ ಸಂಸ್ಥಾಪಕ ಗೌತಮ್ ಕಿರಗಂದೂರು ಮಾತನಾಡಿ, ತಾ.೨೫ ವರೆಗೆ ಶಿಬಿರ ನಡೆಯಲಿದ್ದು, ಮಕ್ಕಳ ಬಾಲ್ಯವನ್ನು ಚಂದವಾಗಿಸುವ, ಸುರಕ್ಷಿತವಾಗಿಸುವ ಅಗತ್ಯವಿದೆ. ಮಕ್ಕಳಿಗೆ ಜೀವನ ಕೌಶಲ್ಯ, ಹಳೆ ಆಟಗಳ ಕಲಿಕೆಯೊಂದಿಗೆ, ಸೃಜನ ಶೀಲತೆಗೆ ಒತ್ತು ನೀಡುವ ಚಟುವಟಿಕೆಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.