ಪೊನ್ನಂಪೇಟೆ, ಏ. ೧೪: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ೩ನೇ ವರ್ಷದ ಟಿ ೨೦ ಮಾದರಿಯ ಕೊಡವ ಲೆದರ್‌ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್‌ನ ೫ ನೇ ದಿನದಾಟದಲ್ಲಿ ಕೂರ್ಗ್ ಟೈಟಾನ್ಸ್ ಮತ್ತು ಅಂಜಿಗೇರಿ ನಾಡ್ ತಂಡ ಗೆಲುವು ಸಾಧಿಸಿದವು.

ತಾ.೧೪ ರ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಲೆವರೇಜ್ ನಿಗದಿತ ೨೦ ಓವರ್‌ಗಳಲ್ಲಿ ೭ ವಿಕೆಟ್ ಕಳೆದುಕೊಂಡು ೧೪೪ ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿ, ಕೂರ್ಗ್ ಟೈಟಾನ್ಸ್ ತಂಡಕ್ಕೆ ೧೪೫ ರನ್‌ಗಳ ಗುರಿ ನೀಡಿತು.

ಸಂಕೇತ್ ೪೦ ಎಸೆತಗಳಲ್ಲಿ ೫೬ ರನ್ ಗಳಿಸಿದರು. ಕೂರ್ಗ್ ಟೈಟಾನ್ಸ್ ಪರ ಪ್ರತೀಕ್ ನಾಚಪ್ಪ ೩ ವಿಕೆಟ್ ಪಡೆದರು. ೧೪೫ ರನ್‌ಗಳ ಗುರಿ ಬೆನ್ನಟ್ಟಿದ ಕೂರ್ಗ್ ಟೈಟಾನ್ಸ್ ೧೯.೧ ಓವರ್‌ಗಳಲ್ಲಿ ೯ ವಿಕೆಟ್ ಕಳೆದುಕೊಂಡು, ೧ ವಿಕೆಟ್ ಗೆಲುವು ಸಾಧಿಸಿತು.

ಕುಟ್ಟಪ್ಪ ೨೩ ಎಸೆತಗಳಲ್ಲಿ ೩೩ ರನ್ ಗಳಿಸಿದರು. ಟೀಮ್ ಲೆವರೇಜ್ ಪರ ಸಾಶ್ವಿತ್ ಸೋಮಣ್ಣ ೩ ವಿಕೆಟ್ ಪಡೆದರು. ಕೂರ್ಗ್ ಟೈಟಾನ್ಸ್ನ ಪ್ರತೀಕ್ ನಂಜಪ್ಪ ಪಂದ್ಯ ಪುರುಷೋತ್ತಮ ಪಶಸ್ತಿ ಪಡೆದುಕೊಂಡರು. ಅಂಜಿಗೇರಿ ನಾಡ್ ಮತ್ತು ಕೊಡವ ರೈಸಿಂಗ್ ಸ್ಟಾರ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಂಜಿಗೇರಿ ನಾಡ್, ೧೮ ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ೧೯೯ ರನ್‌ಗಳ ಉತ್ತಮ ಮೊತ್ತ ಕಲೆಹಾಕಿತು. ಸಮಿತ್ ಸೋಮಣ್ಣ ೫೧ ಎಸೆತಗಳಲ್ಲಿ ೭೬ ರನ್, ಮಂಜು ಕೆ.ಬಿ. ೩೪ ಎಸೆತಗಳಲ್ಲಿ ೫೦ ರನ್ ಗಳಿಸಿದರು.

ಕೊಡವ ರೈಸಿಂಗ್ ಸ್ಟಾರ್ಸ್ ಪರ ಅರ್ಜುನ್ ಪೊನ್ನಣ್ಣ ೨ ವಿಕೆಟ್ ಪಡೆದರು. ಗೆಲ್ಲಲು ೨೦೦ ರನ್ ಗಳ ಗುರಿ ಬೆನ್ನಟ್ಟಿದ ಕೊಡವ ರೈಸಿಂಗ್ ಸ್ಟಾರ್ಸ್ ನಿಗದಿತ ಓವರ್‌ಗಳಲ್ಲಿ ೮ ವಿಕೆಟ್ ಕಳೆದುಕೊಂಡು ೧೪೬ ರನ್ ಗಳಿಸಿ ೫೩ ರನ್‌ಗಳಿಂದ ಸೋಲೊಪ್ಪಿಕೊಂಡಿತು. ಅಂಜಿಗೇರಿ ನಾಡ್ ಈ ಪಂದ್ಯಾವಳಿಯ ಸತತ ೪ ನೇ ಗೆಲುವು ಪಡೆಯಿತು. ಅನ್ಸುಲ್ ಪೊನ್ನಣ್ಣ ೨೮ ಎಸೆತಗಳಲ್ಲಿ ೩೩ ರನ್ ಗಳಿಸಿದರು. ಅಂಜಿಗೇರಿ ನಾಡ್ ಪರ ಗಗನ್ ಗಣಪತಿ ೨ ವಿಕೆಟ್ ಗಳಿಸಿದರು. ಅಂಜಿಗೇರಿ ನಾಡ್‌ನ ಮಂಜು. ಕೆ.ಬಿ. ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು. - ಚನ್ನನಾಯಕ