ಸಿದ್ದಾಪುರ, ಏ. ೧೩: ಲೈನ್ಮನೆಗಳಲ್ಲಿ ಹಾಗೂ ಬಾಡಿಗೆ ಮನೆಗಳಲ್ಲಿ ವಾಸ ಮಾಡಿಕೊಂಡಿರುವ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಹಾಗೂ ಶಾಶ್ವತ ಸೂರು ಕಲ್ಪಿಸಲು ಒತ್ತಾಯಿಸಿ ಜಿಲ್ಲಾ ಸಿಐಟಿಯು ಸಂಘಟನೆ ನೇತೃತ್ವದಲ್ಲಿ ಮಾಲ್ದಾರೆಯ ಗ್ರಾಮ ಪಂಚಾಯಿತಿಯ ಕಚೇರಿಯ ಎದುರು ತಾ.೧೬ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಸಿ.ಐ.ಟಿ.ಯು. ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಮಹಾದೇವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಹೆಚ್ಚು ಬಡ ಕುಟುಂಬಗಳು ನಿವೇಶನ ಇಲ್ಲದೆ ತಲತಲಾಂತರಗಳಿAದ ಕಾಫಿ ತೋಟಗಳ ಲೈನ್ ಮನೆಗಳಲ್ಲಿ ಮತ್ತು ಬಾಡಿಗೆ ಮನೆಗಳಲ್ಲಿ ವಾಸ ಮಾಡಿಕೊಂಡಿದ್ದಾರೆ. ಆದರೆ ಇಂತಹ ಬಡ ಕುಟುಂಬಗಳಿಗೆ ಜನಪ್ರತಿನಿಧಿಗಳು, ಜಿಲ್ಲಾಡಳಿತ ಶಾಶ್ವತ ಸೂರು ಕಲ್ಪಿಸದೆ ನಿರ್ಲಕ್ಷ ವಹಿಸುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಶಾಸಕರುಗಳಿಗೆ ಮನವಿ ಪತ್ರ ಹಲವು ಬಾರಿ ನೀಡಿದ್ದರೂ ಕೂಡ ಯಾರು ಸ್ಪಂದಿಸಿಲ್ಲ. ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಿವೇಶನ ರಹಿತ ಕುಟುಂಬಗಳನ್ನು ಒಗ್ಗೂಡಿಸಿ ಪ್ರತಿಭಟನೆಯನ್ನು ಮಾಡಲಾಗುವುದು ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಎ.ಸಿ. ಸಾಬು ಮಾತನಾಡಿ, ಸರ್ಕಾರವು ಸರ್ಕಾರಿ ಭೂಮಿಯನ್ನು ಒತ್ತುವರಿದಾರರಿಂದ ವಶಕ್ಕೆ ಪಡೆದುಕೊಳ್ಳದೆ ಅದನ್ನು ಗುತ್ತಿಗೆ ಆಧಾರದಲ್ಲಿ ನೀಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದರು. ಗೋಷ್ಠಿಯಲ್ಲಿ ಸದಸ್ಯ ಶಿವ.ಸಿ. ಹಾಜರಿದ್ದರು.