ಕುಶಾಲನಗರ, ಏ. ೧೨: ಕುಶಾಲನಗರ ವ್ಯವಸಾಯ ಉತ್ಪನ್ನ ಮಾರುಕಟ್ಟೆ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹೆಚ್.ಬಿ ಚಂದ್ರಪ್ಪ ಆಯ್ಕೆಯಾಗಿದ್ದಾರೆ. ಈ ಸಾಲಿನ ಅಧ್ಯಕ್ಷರಾಗಿದ್ದ ಎಂ.ಎನ್ ಕುಮಾರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ೧೨ ಮಂದಿ ನಿರ್ದೇಶಕರು ಮತದಾನದಲ್ಲಿ ಪಾಲ್ಗೊಂಡಿದ್ದರು. ಇಬ್ಬರು ಅಭ್ಯರ್ಥಿಗಳ ನಡುವೆ ನಡೆದ ಚುನಾವಣೆಯಲ್ಲಿ ಹೆಚ್.ಬಿ ಚಂದ್ರಪ್ಪ ಅವರಿಗೆ ೭ ಮತಗಳು, ಪ್ರತಿಸ್ಪರ್ಧಿ ಕೆ.ಎಂ ಪ್ರಸನ್ನ ಅವರಿಗೆ ೫ ಮತಗಳು ಲಭ್ಯವಾಗಿವೆ. ಚುನಾವಣಾ ಅಧಿಕಾರಿಯಾಗಿ ಕೊಡಗು ಡಿಸಿಸಿ ಬ್ಯಾಂಕಿನ ಅಧಿಕಾರಿ ಮೋಹನ್ ಕಾರ್ಯನಿರ್ವಹಿಸಿದರು.

ಈ ಸಂದರ್ಭ ನಿರ್ದೇಶಕರು ಹಾಗೂ ಸಂಘದ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಉಪಸ್ಥಿತರಿದ್ದರು.