ಮಡಿಕೇರಿ, ಏ. ೧೨: ಬೆಂಗಳೂರಿನಲ್ಲಿ ಶುಕ್ರವಾರ ನಡುರಾತ್ರಿ ನಡೆದಿದ್ದ ರಸ್ತೆ ಅವಘಡವೊಂದರಲ್ಲಿ ಗಂಭೀರ ಗಾಯಗೊಂಡಿದ್ದ ಜಿಲ್ಲೆಯ ಯುವಕನೋರ್ವ ಬಳಿಕ ಆಸ್ಪತ್ರೆಯಲ್ಲಿ ದುರ್ಮರಣಗೊಂಡಿರುವ ಘಟನೆ ನಡೆದಿದೆ.

ಮೂಲತಃ ಮುಟ್ಲು ಗ್ರಾಮ ನಿವಾಸಿ, ಮೈಸೂರಿನಲ್ಲಿ ನೆಲೆಸಿದ್ದ ಪುದಿಯತಂಡ ರಮೇಶ್ ಉತ್ತಯ್ಯ ಹಾಗೂ ಉಮ್ಮಕ್ಕಿ ದಂಪತಿಯ ಪುತ್ರ ದರ್ಶನ್ (೨೭) ಮೃತಪಟ್ಟಿರುವ ಯುವಕ.

ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸದಲ್ಲಿದ್ದ ದರ್ಶನ್ ಶುಕ್ರವಾರ ರಾತ್ರಿ ಪಾಳಿಯ ಕೆಲಸ ಮುಗಿಸಿ ಬೈಕ್‌ನಲ್ಲಿ ಮನೆಯತ್ತ ಹಿಂತಿರುಗುತ್ತಿದ್ದಾಗ ಲಾರಿಯೊಂದಕ್ಕೆ ಬೈಕ್ ತಗುಲಿದ್ದು, ನಿಯಂತ್ರಣ ತಪ್ಪಿ ಡಿವೈಡರ್‌ಗೆ ಅಪ್ಪಳಿಸಿ ದರ್ಶನ್ ಗಂಭೀರ ಗಾಯಗೊಂಡಿದ್ದರೆನ್ನಲಾಗಿದೆ.

ಅಲ್ಲಿನ ಸಿಲಿಕಾನ್ ಸಿಟಿಯ ಹೊಸಕೋಟೆ ಸನಿಹ ಈ ಅವಘಡ ಸಂಭವಿಸಿದೆ. ಗಾಯಾಳುವನ್ನು ಸ್ಥಳೀಯರು ಅಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು.

ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಮುಟ್ಲುವಿನ ದೇವರ ಹಬ್ಬದ ಕಟ್ಟು ಇರುವ ಹಿನ್ನೆಲೆ ಭಾನುವಾರ ತಡರಾತ್ರಿ ಅಲ್ಲಿನ ನಿಯಮದಂತೆ ಮೃತದೇಹ ತರಲಾಗಿದ್ದು, ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ಘಟನೆ ಬಗ್ಗೆ ಹೊಸಕೋಟೆ ವ್ಯಾಪ್ತಿಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.