ಶನಿವಾರಸಂತೆ, ಏ. ೧೨: ವಿದ್ಯಾರ್ಥಿಗಳು ತಮ್ಮ ಕಲಿಕಾ ಅವಧಿಯಲ್ಲಿ ಕಾಲಹರಣ ಮಾಡದೇ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು ಎಂದು ಶನಿವಾರಸಂತೆ ಶ್ರೀ ವಿಘ್ನೇಶ್ವರ ಬಾಲಿಕ ಪ್ರೌಢ ಶಾಲಾ ಶಿಕ್ಷಕ ಕೆ.ಪಿ. ಜಯಕುಮಾರ್ ಕರೆ ನೀಡಿದರು.
ಮಾಲಂಬಿ ವಾಲ್ಮೀಕಿ ವಸತಿ ಶಾಲೆಯಲ್ಲಿ ಪಡವಲಹಿಪ್ಪೆ ಶ್ರೀ ಹೆಚ್.ಡಿ. ದೇವೇಗೌಡ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಸಮಾಜ ಸೇವಾ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಮಾತನಾಡಿ, ಇಂದು ವಿದ್ಯಾರ್ಥಿಗಳಿಗೆ ಸೌಲಭ್ಯಗಳು ಹೆಚ್ಚಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಮಕ್ಕಳಿಗೆ ಗುರಿ ಹಾಗೂ ಅದನ್ನು ತಲುಪಿಸಲು ಮಾರ್ಗದರ್ಶನ ಮಾಡುವ ಗುರು ಇರಬೇಕು. ಮಕ್ಕಳು ತಮ್ಮ ತಂದೆ - ತಾಯಿಯರ ಕನಸು ನನಸು ಮಾಡಬೇಕು. ತಮ್ಮ ತಂದೆ - ತಾಯಿಯರು ಹೇಳುವ ಬುದ್ಧಿಮಾತಿಗೆ ಕೋಪಗೊಳ್ಳದೆ ನಡೆದುಕೊಂಡರೆ ನಿಮ್ಮ ಗುರಿ ಸುಲಭವಾಗಿ ತಲುಪಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಹಾಸನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಜಯಸ್ವಾಮಿ, ಇಂತಹ ಶಿಬಿರಗಳಲ್ಲಿ ಅನೇಕ ಕಲಿಕೆಗಳನ್ನು ಕಲಿಯಲು ಅವಕಾಶವಿದೆ. ಇಂತಹ ಶಿಬಿರಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಪ್ರಾಧ್ಯಾಪಕ ಮಂಜುನಾಥ್ ಮಾತನಾಡಿ, ಅದಿವಾಸಿ ಬುಡಕಟ್ಟು ಜನಾಂಗದವರು ಇಂದು ಕಾಡು ಹಾಗೂ ಕಾಡು ಪ್ರಾಣಿಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶಿಬಿರಾರ್ಥಿಗಳು ನಿಮ್ಮ ಕೌಶಲ್ಯ ಹಾಗೂ ನಿಮ್ಮ ಜ್ಞಾನವನ್ನು ಇಲ್ಲಿಯ ಸಮುದಾಯದವರೊಂದಿಗೆ ಹಂಚಿಕೊಳ್ಳಿ ಇವರನ್ನು ನೀವು ಹತ್ತಿರವಾÀಗಬೇಕು ಎಂದರು.
ಪ್ರಾಧ್ಯಾಪಕ ನಾಗೇಂದ್ರ ಮಾತನಾಡಿ, ನಾವು ಎಷ್ಟು ವರ್ಷ ಬದುಕುತ್ತೇವೆ ಎನ್ನುವುದಕ್ಕಿಂತ ಯಾವ ರೀತಿ ಬದುಕಿದ್ದೇವೆ ಹಾಗೂ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ನಾವು ಅರಿತು ಬದುಕಬೇಕು ಎಂದರು. ಪ್ರಾಧ್ಯಾಪಕ ಉಮೇಶ್, ಮಲ್ಲಿಪಟ್ಟಣದ ಗುತ್ತಿಗೆದಾರ ಸುಧೀರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಅನಂತ್ ಕುಮಾರ್, ದಿವಾಕರ್, ಶ್ರೀಗುರು, ಡಾ. ಗೌತಮ್, ಕೃಷ್ಣ, ನವೀನ್, ಪ್ರಮುಖರಾದ ಶಶಿ, ಶಿಬಿರ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕರು ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಡಾ. ಹೆಚ್.ಎನ್. ದೀಪು, ಸಹಾಯಕ ಪ್ರಾಧ್ಯಾಪಕ ವೆಂಕಟೇಶ್, ರೇಖಾಶ್ರೀ ಮುಂತಾದವರಿದ್ದರು.