ಕುಶಾಲನಗರ, ಏ. ೧೨: ಕುಶಾಲನಗರ ಪುರಸಭೆಯ ಪೌರಕಾರ್ಮಿಕರಿಗೆ ವಸತಿ ಗೃಹಗಳ ನಿರ್ಮಾಣಕ್ಕೆ ಅಗತ್ಯವಿರುವ ಒಂದು ಎಕರೆ ಜಾಗದ ಹಕ್ಕುಪತ್ರ ಆದೇಶ ಪ್ರತಿಯನ್ನು ಮಡಿಕೇರಿ ಕ್ಷೇತ್ರ ಶಾಸಕರಾದ ಮಂತರ್ ಗೌಡ ಅವರು ಪೌರಕಾರ್ಮಿಕರ ಸಂಘದ ಪದಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು.

ಕುಶಾಲನಗರದಲ್ಲಿ ನಡೆದ ಕೆಡಿಪಿ ಸಭೆ ಸಂದರ್ಭ ಶಾಸಕರು ಆದೇಶ ಪತ್ರಗಳನ್ನು ಹಸ್ತಾಂತರಿಸಿ ಮಾತನಾಡಿ, ನಿತ್ಯ ಪಟ್ಟಣದ ಸ್ವಚ್ಛತೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಏಳಿಗೆ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು. ಈ ಸಂಬAಧ ಅವರುಗಳಿಗೆ ವಸತಿಗೃಹ ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿದೆ ಎಂದು ತಿಳಿಸಿದರು.

ಮುಳ್ಳುಸೋಗೆ ಗ್ರಾಮ ವ್ಯಾಪ್ತಿಯ ಹಾರಂಗಿ ರಸ್ತೆ ಬದಿಯಲ್ಲಿರುವ ಸುಮಾರು ಒಂದು ಎಕರೆ ವಿಸ್ತೀರ್ಣದ ಜಾಗವನ್ನು ವಸತಿಗೃಹ ನಿರ್ಮಾಣಕ್ಕೆ ಮೀಸಲಾಗಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಪುರಸಭೆ ಮುಖ್ಯ ಅಧಿಕಾರಿ ಗಿರೀಶ್ ತಾಲೂಕು ಕಿರಣ್ ಜಿ ಗೌರಯ್ಯ, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್, ಪುರಸಭಾ ಆಡಳಿತ ಅಧಿಕಾರಿ ಅಬ್ದುಲ್ ನಬಿ, ಆರೋಗ್ಯ ಅಧಿಕಾರಿ ಉದಯ್ ಕುಮಾರ್, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಧನಂಜಯ್, ಕೆ. ರಶ್ಮಿ, ಮತ್ತಿತರರು ಇದ್ದರು.