ಮಡಿಕೇರಿ, ಏ.11: ಹಿಂದೆ ಸರಪಳಿ ಮೂಲಕ ಭೂ ಸಮೀಕ್ಷೆ ಅಥವಾ ಸರ್ವೆ ಮಾಡಲಾಗುತ್ತಿದ್ದು, ಈಗ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಅವುಗಳನ್ನು ಬಳಸಿಕೊಂಡು ತ್ವರಿತವಾಗಿ ಭೂಮಾಪನ ಸರ್ವೆ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ ಸೋಮಶೇಖರ್ ಸಲಹೆ ಮಾಡಿದರು.

ಜಿಲ್ಲಾಡಳಿತ ಸಹಕಾರದಲ್ಲಿ ರಾಷ್ಟ್ರೀಯ ಭೂ ಮಾಪನ ಕಂದಾಯ ವ್ಯವಸ್ಥೆ ಹಾಗೂ ಭೂ ದಾಖಲೆಗಳ ಇಲಾಖೆ ವತಿಯಿಂದ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ 37ನೇ ರಾಷ್ಟ್ರೀಯ ಭೂಮಾಪನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಪೋಡಿ ಸರ್ವೆ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದ್ದು, ಆದ್ದರಿಂದ ಆದ್ಯತೆ ಮೇಲೆ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.

ಇಂದಿನ ತಂತ್ರಜ್ಞಾನ ಹಾಗೂ ಸರ್ಕಾರದ ಸೌಲಭ್ಯವನ್ನು ಬಳಸಿಕೊಂಡು ಕಾಲ ಮಿತಿಯಲ್ಲಿ ಸರ್ವೆ ಕಾರ್ಯವನ್ನು ಪೂರ್ಣಗೊಳಿಸುವಂತಾಗಬೇಕು ಸರ್ಕಾರ ನೌಕರರಿಗೆ ಹಲವು ರೀತಿಯ ಸೌಲಭ್ಯಗಳನ್ನು ನೀಡಿದ್ದು, ಆತ್ಮವಿಮರ್ಶೆ ಹಾಗೂ ಆತ್ಮವಲೋಕನ ಮಾಡಿಕೊಂಡು ಭೂಮಾಪಕ ಸರ್ವೇ ಕಾರ್ಯ ಮೂಲಕ ಪ್ರಗತಿ ಸಾಧಿಸಬೇಕು. ಆ ನಿಟ್ಟಿನಲ್ಲಿ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕರಾದ ಎಂ.ಎನ್ ನಿರಂಜನ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ 3.78 ಲಕ್ಷ ಆಕಾರ್ ಬಂಧಿಯನ್ನು ಡಿಜಿಟಲೀಕರಣ ಮಾಡಿ ಅಪ್‍ಲೋಡ್ ಮಾಡಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ದರ್ಖಾಸು ಪೋಡಿ ಸರ್ವೇಯಲ್ಲಿ ಸರ್ಕಾರಿ ಭೂಮಿಗಳಲ್ಲಿ ಭೂ ಮಂಜೂರಾತಿಯಾಗಿ ಹಲವು ವರ್ಷಗಳಿಂದ ದುರಸ್ತಿಯಾಗದೆ ಬಾಕಿ ಇದ್ದ ಪ್ರಕರಣಗಳನ್ನು ಸರ್ವೇ ಮಾಡಿ 2 ಸಾವಿರಕ್ಕೂ ಹೆಚ್ಚು ಪಹಣಿಗಳನ್ನು ಸೃಜಿಸಲಾಗಿದೆ ಎಂದು ಎಂ.ಎನ್ ನಿರಂಜನ ಅವರು ವಿವರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಮಾತನಾಡಿ, ಭಾರತದ ಭೂ ಸಮೀಕ್ಷೆಯ ಇತಿಹಾಸವು 18ನೇ ಶತಮಾನದಷ್ಟು ಹಳೆಯದಾಗಿದೆ. ಬ್ರಿಟೀಷ್ ಆಡಳಿತದ ಅವಧಿಯಲ್ಲಿ ಸಮೀಕ್ಷೆ ಕಾರ್ಯವು ವೈಜ್ಞಾನಿಕವಾಗಿ ಆರಂಭವಾಯಿತು ಎಂದು ತಿಳಿಸಿದರು.

ಭೂ ದಾಖಲೆಗಳ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ಮಹೇಶ್ ಕುಮಾರ್, ಪರಮೇಶ್, ನಾಗೇಶ್, ಸರ್ವೇ ಮೇಲ್ವಿಚಾರಕರು, ಭೂ ಮಾಪಕರು ಇತರರು ಇದ್ದರು.