ಸುಂಟಿಕೊಪ್ಪ, ಏ. 10: ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೇ. 29, 30 ರಂದು ಸುಂಟಿಕೊಪ್ಪ ಜಿ. ಎಂ.ಪಿ. ಶಾಲಾ ಮೈದಾನದಲ್ಲಿ ನಡೆಯಲಿದೆ.
ಗುರುವಾರದಂದು ಸುಂಟಿಕೊಪ್ಪ ಕೊಡವ ಸಮಾಜದ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‍ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಶಾಸಕರು, ಅರ್ಥಿಕ ಸಂಪನ್ಮೂಲ ಕ್ರೂಡೀಕರಣದ ಕುರಿತು ಯಾವುದೇ ಅತಂಕ ಬೇಡ ಸಮ್ಮೇಳನವನ್ನು ಸದಾಕಾಲ ನೆನಪಿಸಿಕೊಳ್ಳುವಂತಹ ಮುಂದಿನ ಎಲ್ಲಾ ಸಮ್ಮೇಳನಗಳಿಗೆ ಮಾದರಿಯಾಗುವಂತಹ ರೀತಿಯಲ್ಲಿ ಆಯೋಜಿಸಬೇಕೆಂದು ಅವರು ಕರೆ ನೀಡಿದರು.
ವಿಶೇಷವಾಗಿ ಯುವಕರು ಮತ್ತು ಮಹಿಳೆಯರನ್ನು ಸಂರ್ಪಕಿಸಿ ಸಾಹಿತ್ಯದ ಕಡೆಗೆ ಅವರನ್ನು ಸೆಳೆಯಬೇಕೆಂದು ಕಿವಿಮಾತು ಹೇಳಿದರು.
ಜಿಲ್ಲಾಮಟ್ಟದ ಕಾರ್ಯಕ್ರಮವಾಗಿರುವ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಅಥವಾ ಮಡಿಕೇರಿ ಕ್ಷೇತ್ರಕ್ಕೆ ಸಿಮೀತವಾಗಿಸದೆ ಜಿಲ್ಲೆಯ 104 ಗ್ರಾಮ ಪಂಚಾಯಿತಿಗಳನ್ನು ತಲುಪಿ ಜಿಲ್ಲೆಯ ಎಲ್ಲೆಡೆಗಳಿಂದ ಸಾಹಿತ್ಯ ಅಭಿಮಾನಿಗಳು ಆಸಕ್ತರು ಕನ್ನಡಿಗರು ಸಹಾಸ್ರ ಸಂಖ್ಯೆಯಲ್ಲಿ ಬರುವಂತಾಗಬೇಕೆಂದು ಹೇಳಿದರು.
ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಸುಂಟಿಕೊಪ್ಪ ಹೋಬಳಿಯು ವಿಶಿಷ್ಟ ಭೂಪ್ರದೇಶವಾಗಿದ್ದು ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿ ಕುಶಾಲನಗರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಐಗೂರಿನಲ್ಲಿ ನಡೆದ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿ ಆಯೋಜನೆಯನ್ನು ಮಾದರಿಯಾಗಿ ಇಟ್ಟುಕೊಂಡು ಸುಂಟಿಕೊಪ್ಪದಲ್ಲಿ ಅತ್ಯಂತ ವಿಜೃಂಭಣೆಯಿಂದ ಸಾಹಿತ್ಯ ಸಮ್ಮೇಳನವನ್ನು ಅಯೋಜಿಸಿ ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಕೊಡಗು ಜಿಲ್ಲೆಯಲ್ಲಿ ತನ್ನದೆಯಾದ ವೈಶಿಷ್ಟ್ಯತೆ ಪರಂಪರೆಯನ್ನು ಹೊಂದಿರುವ ಸುಂಟಿಕೊಪ್ಪ ಹೋಬಳಿಯಲ್ಲಿ ಈ ಸಾಲಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ತೀರ್ಮಾನಿಸಲಾಗಿದೆ. ಸಮ್ಮೇಳನವು 2 ದಿನಕಾಲ ನಡೆಯಲಿದ್ದು, ಸಮ್ಮೇಳನದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸಮ್ಮೇಳನದ ಯಶಸ್ವಿಗಾಗಿ ಅಂದಾಜು ರೂ. 18 ರಿಂದ 19 ಲಕ್ಷ ವೆಚ್ಚ ತಗುಲಿದ್ದು ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಲು 11 ಉಪ ಸಮಿತಿಗಳ ರಚಿಸಲಾಗಿದೆ. ರೂ.5 ಲಕ್ಷ ಅನುದಾನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನೀಡುತ್ತದೆ ಎಂದು ಮಾಹಿತಿ ನೀಡಿದರು.
ಹಣಕಾಸು ಸಮಿತಿಯ ಅಧ್ಯಕ್ಷ ಎ. ಲೋಕೇಶ್ ಕುಮಾರ್ ಮಾತನಾಡಿ, ಸಮ್ಮೇಳನವನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಕೈಜೋಡಿಸುವಂತೆ ಕೋರಿದರು. ಇದೇ ಸಂದರ್ಭ ಸಮ್ಮೇಳನದ ಯಶಸ್ವಿಯಾಗಿ ರಚಿಸಲಾದ ವಿವಿಧ ಉಪಸಮಿತಿಗಳ ಸಂಚಾಲಕರು ತಮ್ಮ ತಮ್ಮ ಸಮಿತಿಗಳ ಕಾರ್ಯ ಪ್ರಗತಿಯ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕ.ಸಾ.ಪ. ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ಸುಂಟಿಕೊಪ್ಪ ಹೋಬಳಿ ಕ.ಸಾ.ಪ. ಅಧ್ಯಕ್ಷ ಪಿ.ಎಫ್. ಸಬಾಸ್ಟೀನ್, ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್, ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ರೇವತಿ ರಮೇಶ್, ಸುಂಟಿಕೊಪ್ಪ ಹೋಬಳಿ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಅನಿಲ್‍ಕುಮಾರ್, ಮಹಿಳಾ ಕಾರ್ಯದರ್ಶಿ ಲೀಲಾ ಮೇದಪ್ಪ, ಸುಂಟಿಕೊಪ್ಪ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್, ಕನ್ನಡ ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್, ಸುಂಟಿಕೊಪ್ಪ ಉಪತಹಶೀಲ್ದಾರ್ ಕೆ.ಎಂ.ದೀಪಿಕಾ, ಚೆಸ್ಕಾಂ ಕಿರಿಯ ಅಭಿಯಂತರ ಲವಕುಮಾರ್, ಸುಂಟಿಕೊಪ್ಪ ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ, ಜಿಲ್ಲಾ ಮತ್ತು ತಾಲೂಕು ಹಾಗೂ ಹೋಬಳಿ ಕಸಾಪ ವಿವಿಧ ಪದಾಧಿಕಾರಿಗಳು ಕಸಾಪ ಸದಸ್ಯರುಗಳು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.