ಕುಶಾಲನಗರ, ಏ. 10: ಕುಶಾಲನಗರ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರೊಬ್ಬರು ಕಾನೂನುಬಾಹಿರವಾಗಿ ತಮ್ಮ ಕುಟುಂಬ ಸದಸ್ಯರ ಹೆಸರಿನಲ್ಲಿ ಅಕ್ರಮ ನಿವೇಶನ ಮಂಜೂರು ಮಾಡಿಸಿಕೊಂಡಿರುವ ಪ್ರಕರಣ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮನೆಗೆ ದಾಳಿ ಮಾಡಿ ದಾಖಲೆಗಳನ್ನು ವಶಪಡಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ. ಪ್ರಕರಣ ಸಂಬಂಧ ಅಂದಿನ ತಾಲೂಕು ತಹಶೀಲ್ದಾರ್ ಮಹೇಶ್ ಮತ್ತು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹರೀಶ್ ಹಾಗೂ ಅವರ ಪತ್ನಿ ಸುನಿತಾ ಮೇಲೆ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಹಿಂದೆ ಅಸ್ತಿತ್ವದಲ್ಲಿದ್ದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಆಡಳಿತ ಅವಧಿಯ 2018-19 ರ ಸಾಲಿನಲ್ಲಿ ಆಗಿನ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಡಿ.ಎಸ್. ಹರೀಶ್ ಪಂಚಾಯಿತಿ ವ್ಯಾaಪ್ತಿಯ ಗೊಂದಿಬಸವನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸರಕಾರಿ 4ಆರನೇ ಪುಟಕ್ಕೆ

(ಮೊದಲ ಪುಟದಿಂದ) ನಿವೇಶನ ಒಂದನ್ನು ತನ್ನ ಪತ್ನಿ ಸುನಿತಾ ಹೆಸರಲ್ಲಿ ಕಾನೂನುಬಾಹಿರವಾಗಿ ಮಂಜೂರು ಮಾಡಿಕೊಂಡಿರುವ ಬಗ್ಗೆ ವೆಂಕಟೇಶ್ ಎಂಬವರ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಗೊಂದಿ ಬಸವನಹಳ್ಳಿ ಸರ್ವೆ ನಂಬರ್ 15/2 ರಲ್ಲಿ 30*40 ನಿವೇಶನಕ್ಕೆ ಅಂದಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಸಹಕಾರದೊಂದಿಗೆ ಹಕ್ಕು ಪತ್ರ ಪಡೆದು 9-11 ಪ್ರಕ್ರಿಯೆ ನಂತರ ದಾಖಲೆಯನ್ನು ತಿದ್ದಿ ನಿವೇಶನದ ವಿಸ್ತೀರ್ಣವನ್ನು 55*48 ಮಾಡುವ ಮೂಲಕ ಕುಶಾಲನಗರ ಪುರಸಭೆಯಲ್ಲಿ ಫಾರಂ 3 ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಪ್ರಕರಣದಲ್ಲಿ ಮಾಜಿ ಸದಸ್ಯ ಸೇರಿದಂತೆ ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಅಂದು ಕರ್ತವ್ಯದಲ್ಲಿದ್ದ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಎಸ್. ಮಹೇಶ್ ಶಾಮೀಲು ಆಗಿರುವ ಸಂಶಯ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ಕೈಗೊಂಡಿದ್ದಾರೆ.

ಕಾನೂನುಬಾಹಿರವಾಗಿ ನಿವೇಶನ ಹಕ್ಕು ಪತ್ರ ಸರ್ಕಾರದ ಆಸ್ತಿಗೆ ನಷ್ಟ ಉಂಟು ಮಾಡಿದ್ದಾರೆ ಎನ್ನುವ ಆರೋಪದೊಂದಿಗೆ ಲೋಕಾಯುಕ್ತ ಅಧಿಕಾರಿಗಳು ದೂರು ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ.

ಲೋಕಾಯುಕ್ತ ಎಸ್‍ಪಿ ಉಮೇಶ್ ಅವರ ನಿರ್ದೇಶನದಲ್ಲಿ ಲೋಕಾಯುಕ್ತ ಡಿವೈಎಸ್‍ಪಿ ದಿನಕರ ಶೆಟ್ಟಿ ಅವರ ನೇತೃತ್ವದಲ್ಲಿ ಅಧಿಕಾರಿಗಳು ಏಕಕಾಲದಲ್ಲಿ ನಾಲ್ಕು ಕಡೆ ದಾಖಲೆಗಳನ್ನು ಕಲೆ ಹಾಕಿದ್ದು ಪಂಚಾಯಿತಿ ಮಾಜಿ ಸದಸ್ಯ ಹರೀಶ್ ಅವರಿಗೆ ಸೇರಿದ 9 ಪಿತ್ರಾರ್ಜಿತ ನಿವೇಶನಗಳ ದಾಖಲೆಗಳು ಮತ್ತು ಸ್ವಂತ ಮನೆಯ ದಾಖಲೆಗಳನ್ನು ಸೇರಿದಂತೆ ಅಕ್ರಮವಾಗಿ ಪಡೆದ ನಿವೇಶನದ ಸಮಗ್ರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕುಶಾಲನಗರ ಪುರಸಭೆ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆ ಕಲೆ ಹಾಕಿದ್ದಾರೆ. ಡಿವೈಎಸ್ಪಿ ದಿನಕರ್ ಶೆಟ್ಟಿ ತನಿಖಾಧಿಕಾರಿಯಾಗಿದ್ದು ಕಾರ್ಯಾಚರಣೆಯಲ್ಲಿ ಇನ್ಸ್‍ಪೆಕ್ಟರ್‍ಗಳಾದ ವೀಣಾ ನಾಯಕ್, ವಿಜಯ್, ಶಾಂತನಾಥ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.