ಐಗೂರು, ಏ. 10: ಐಗೂರು ವ್ಯಾಪ್ತಿಯ ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿರುವ ಬಸವೇಶ್ವರ ದೇವಾಲಯದ ವಾರ್ಷಿಕ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಅರ್ಚಕರಾದ ಚಂದ್ರ ಆರಾಧ್ಯ ಅವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿದವು.
ಬಸವಣ್ಣ ದೇವರು, ಕನ್ನಂಬಾಡಿ ಅಮ್ಮ ಹಾಗೂ ಆಂಜನೇಯ ದೇವರ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಅಡ್ಡ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಸಲಾಯಿತು. ಬಳಿಕ ಹಾರಂಗಿ ಹಿನ್ನೀರಿನ ಬದಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಮೆರವಣಿಗೆಯು ವಾಪಸ್ಸಾಗುವ ವೇಳೆ ದೇವಾಲಯದ ಸಮೀಪ ನಿರ್ಮಿಸಿದ ಕೊಂಡದಲ್ಲಿ ಭಕ್ತಾದಿಗಳು ಕೆಂಡ ಹಾಯುವ ಮೂಲಕ ತಮ್ಮ ಭಕ್ತಿ ವ್ಯಕ್ತಪಡಿಸಿದರು. ದೇವಾಲಯದ ಆವರಣದಲ್ಲಿ ಪ್ರಾಚೀನ ಗ್ರಾಮೀಣ ಸೊಗಡಿನ ಕ್ರೀಡೆಗಳಾದ ಕಾಯಿ ಕೀಳುವುದು, ಕಾಯಿಗೆ ಗುಂಡು ಹೊಡೆಯುವುದು ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ದೇವಾಲಯಕ್ಕೆ ಆಗಮಿಸಿ ಪೂಜೆಯಲ್ಲಿ ಭಾಗವಹಿದ್ದರು. ಇದೇ ವೇಳೆ ಗ್ರಾಮಸ್ಥರು ದೇವಾಲಯದ ಜೀರ್ಣೋದ್ಧಾರಕ್ಕೆ ಶಾಸಕರಿಗೆ ಮನವಿಯನ್ನು ಸಲ್ಲಿಸಿದರು. ತೀರ್ಥ ಅಭಿμÉೀಕ, ಪ್ರಸಾದ ವಿನಿಯೋಗ ಮತ್ತು ಅನ್ನ ಸಂತರ್ಪಣೆ ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ವಿಶ್ವನಾಥ ರಾಜೇ ಅರಸ್, ಸೋಮಯ್ಯ ಮಾಸ್ಟರ್, ವಕೀಲರಾದ ಪಿ.ಕೆ. ಗಣಪತಿ, ಮತ್ತು ಯಡವಾರೆ, ಯಡವನಾಡು ಮತ್ತು ಹಾರಂಗಿ ಪ್ರದೇಶದ ಭಕ್ತಾದಿಗಳು ಭಾಗವಹಿಸಿದ್ದರು.