ಮಡಿಕೇರಿ, ಏ. 9: ಕೊಡವ ಭಾಷೆ, ಸಾಹಿತ್ಯ, ಸಂಸ್ಕøತಿ, ಆಚಾರ-ವಿಚಾರ, ಸಂಪ್ರದಾಯಗಳನ್ನು ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವ ಕೊಡವ ಭಾಷಿಕ ಜನಾಂಗದಲ್ಲೊಂದಾದ ತೆಕ್ಕಡಮ್ಮಂಡ ಕುಟುಂಬವು ಕಳೆದ 50 ವರ್ಷಗಳಿಂದ ಒಂದಾಗಿ ಸೇರುವುದರೊಂದಿಗೆ ಸಂಸ್ಕøತಿಯ ಸಮ್ಮಿಲನವನ್ನು ಯಶಸ್ವಿಯಾಗಿ ನಡೆಸುವುದರ ಮೂಲಕ ಜನಮನ್ನಣೆಗೆ ಪಾತ್ರರಾಗಿದ್ದಾರೆ.
ಕಳೆದ 49 ವರ್ಷಗಳಿಂದ ಕರಡ ಗ್ರಾಮದಲ್ಲಿ ನೆಲೆನಿಂತಿರುವ ತೆಕ್ಕಡಮ್ಮಂಡ ಕುಟುಂಬಸ್ಥರು ತಮಗಳ ಕುಟುಂಬ ಹಾಗೂ ಬಂಧುಗಳ ಟ್ರಸ್ಟ್‍ನ್ನು ರಚಿಸಿಕೊಳ್ಳುವುದರ ಮೂಲಕ 1976 ರಲ್ಲಿ ಟ್ರಸ್ಟ್‍ಗೆ ಚಾಲನೆಯನ್ನು ನೀಡಿದರು. ಇದೀಗ 50ನೇ ವರ್ಷದ ಸುವರ್ಣ ಮಹೋತ್ಸವಕ್ಕೆ ಕಾಲಿಡುವುದರ ಮೂಲಕ ಕೊಡವ ಭಾಷೆ - ಸಂಸ್ಕøತಿಯ ಬೆಳವಣಿಗೆ ಹಾಗೂ ಕುಟುಂಬದವರನ್ನು ಮತ್ತು ತವರುಮನೆ ಹೆಂಗಳೆಯರನ್ನು ಒಂದೆಡೆ ಸೇರಿಸಿ ಒಂದಾಗಿ ಸಮ್ಮಿಲನಗೊಳ್ಳುವುದರ ಮೂಲಕ ಭವಿಷ್ಯದ ಮಕ್ಕಳ ಬಾಳಿಗೆ ದಾರಿದೀಪವಾಗಿ ಮುನ್ನಡೆಯುತ್ತಿದೆ.
ಟ್ರಸ್ಟ್ ಸ್ಥಾಪನೆಗೊಳ್ಳುವುದರ ಮೂಲಕ ಕುಟುಂಬದ ಸದಸ್ಯರ ಆರ್ಥಿಕ ಬವಣೆ ನೀಗಿಸುವಲ್ಲಿ ಸಾಲ ವಿತರಣೆ, ಸಕಾಲಕ್ಕೆ ಮರುಪಾವತಿಯ ವ್ಯವಸ್ಥೆ, ಓದುವ ಮಕ್ಕಳಿಗೆ ಪ್ರೋತ್ಸಾಹಕರ ಉತ್ತೇಜನದ ಧನಸಹಾಯ ವಿತರಣೆ, ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಹಾಗೂ ಪದವಿ ಇನ್ನಿತರ ಉನ್ನತ ವ್ಯಾಸಾಂಗ ಮಾಡುತ್ತಿರುವ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಸಹಾಯಧನ ವಿತರಣೆ ಹಾಗೂ ಪ್ರಶಂಸನಾ ಪತ್ರ ನೀಡಿಕೆ, ಕುಟುಂಬದಲ್ಲಿ ಹಾಗೂ ಬಂಧುಗಳ ಸಂಸಾರದಲ್ಲಿ ಸಾವು-ನೋವುಗಳಂತಹ ಸಂಕಷ್ಟಗಳು ಸಂಭವಿಸಿದಲ್ಲಿ ಕುಟುಂಬದ ಮೂಲಕ ತುರ್ತು ಸ್ಪಂದನ ಹಾಗೂ ಕುಟುಂಬದ ಸದಸ್ಯರ ಭಾಗವಹಿಸುವಿಕೆ... ಇಂತಹ ಹತ್ತು-ಹಲವಾರು ಪ್ರಮುಖ ಉದ್ದೇಶವನ್ನು ಇಟ್ಟುಕೊಂಡು ಮುನ್ನಡೆಯುತ್ತಿರುವ ತೆಕ್ಕಡಮ್ಮಂಡ ಕುಟುಂಬದ ಮಾನವೀಯತಾ ಕೆಲಸ - ಕಾರ್ಯಗಳಿಗೆ ನಾಡಿನಾದ್ಯಂತ ಪ್ರಶಂಸೆಯೂ ದೊರಕುತ್ತಿರುವುದು ವಿಶೇಷವಾಗಿದೆ.
ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ಕುಟುಂಬಸ್ಥರು ಹಾಗೂ ಬಂಧುಗಳ ಟ್ರಸ್ಟ್‍ನ ಮೂಲಕ ವಾರ್ಷಿಕೋತ್ಸವ ಆಚರಣೆ ಹಾಗೂ ವಿವಿಧ ಆಟೋಟಗಳ ಸ್ಪರ್ಧೆಯಲ್ಲಿ ಹಗ್ಗಜಗ್ಗಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ವಾಲಗತಾಟ್‍ನಲ್ಲಿ ಕುಟುಂಬಸ್ಥರು ಪಾಲ್ಗೊಂಡು ಸಂಭ್ರಮಿಸಿದರು
ವಿವಿಧ ಸಾಂಸ್ಕøತಿಕ ಕಾರ್ಯಕ್ರಮ, ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಹನೀಯರಿಗೆ ಸನ್ಮಾನ, ಸರಕಾರಿ ನೌಕರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರದೊಂದಿಗೆ ಮಹಾಸಭೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
100 ವರ್ಷ ಪೂರೈಸುವಂತಾಗಲಿ
ಸುವರ್ಣ ಮಹೋತ್ಸವ ಸಂಭ್ರಮದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ತೆಕ್ಕಡಮ್ಮಂಡ ಕುಟುಂಬ ಹಾಗೂ ಬಂಧುಗಳ ಟ್ರಸ್ಟಿನ ಅಧ್ಯಕ್ಷ ಮೇಕಂಡ ಸುನಿಲ್ ಅರುಣ್‍ಕುಮಾರ್ ಮಾತನಾಡಿ, ಕುಟುಂಬದ ಏಳಿಗೆಗಾಗಿ ದೂರಾಲೋಚನೆಯೊಂದಿಗೆ ಹಿರಿಯರು ಸ್ಥಾಪಿಸಿದಂತಹ ಟ್ರಸ್ಟ್ ಇಂದು ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ಹಿಂದಿನ ಕಾಲದಲ್ಲಿ ಆರ್ಥಿಕ ಹಣಕಾಸಿಗಾಗಿ ಭತ್ತವನ್ನು ಸಂಗ್ರಹಿಸಿ ನಡೆಸಿಕೊಂಡು ಬರುತ್ತಿದ್ದ ಟ್ರಸ್ಟ್ ಇಂದು ಉದಾರ ದಾನಿಗಳ ನೆರವಿನೊಂದಿಗೆ ಸುವರ್ಣ ಸಂಭ್ರಮ ಆಚರಿಸುವತ್ತಾ ದಾಪುಗಾಲು ಹಾಕಿದೆ. ಮುಂದಿನ ದಿನಗಳಲ್ಲಿ ಸಂಸ್ಕøತಿ, ಸಂಪ್ರದಾಯ, ಆಚಾರ-ವಿಚಾರಕ್ಕೆ ಒತ್ತುಕೊಡುವುದರ ಮೂಲಕ ಟ್ರಸ್ಟ್ 100 ವರ್ಷ ಪೂರೈಸುವಂತಾಗಲಿ. ಆ ನಿಟ್ಟಿನಲ್ಲಿ ಕುಟುಂಬದ ಹಾಗೂ ಬಂಧುಗಳ ಸಂಪೂರ್ಣ ಸಹಕಾರ, ಒಗ್ಗಟ್ಟು ಇದೇ ರೀತಿ ಮುಂದುವರಿಯಲಿ ಎಂದು ಸುನಿಲ್ ನುಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬಿ.ಎ. ಪೆಮ್ಮಯ್ಯ, ಬಿ.ಟಿ. ಡಾಲಿ ಉಪಸ್ಥಿತರಿದ್ದರು. ಕುಟುಂಬದ ಪಟ್ಟೇದಾರ ತೆಕ್ಕಡಮ್ಮಂಡ ಜೋಯಪ್ಪ ದೀಪ ಬೆಳಗಿಸುವುದರ ಮೂಲಕ ಮಹಾಸಭೆಗೆ ಚಾಲನೆ ನೀಡಿ ಶುಭ ಕೋರಿದರು. ಟ್ರಸ್ಟ್‍ನ ಕಾರ್ಯದರ್ಶಿ ತೆಕ್ಕಡಮ್ಮಂಡ ಲೋಕೇಶ್ ಕಳೆದ ಸಾಲಿನ ಮಹಾಸಭಾ ವರದಿ ವಾಚಿಸಿದರು. ಸಭೆಯಲ್ಲಿ ಖಜಾಂಚಿ ತೆಕ್ಕಡಮ್ಮಂಡ ಚಿಣ್ಣಪ್ಪ ಲೆಕ್ಕಪತ್ರ ವರದಿ ಮಂಡಿಸಿದರು. ಪಾತಂಡ ರಂಜನ್ ಸ್ವಾಗತಿಸಿ, ಕವಿತಾ ವಂದಿಸಿದರು.
ವಾರ್ಷಿಕೋತ್ಸವ ಸಂದರ್ಭ ನಡೆಸಲಾದ ವಿವಿಧ ಸ್ಪರ್ಧಾ ಕಾರ್ಯಕ್ರಮದ ಜವಾಬ್ದಾರಿಯನ್ನು ಕ್ರೀಡಾ ಸಮಿತಿ ಅಧ್ಯಕ್ಷ ವಿ.ಬಿ. ವಿಠಲ ಹಾಗೂ ಕಾರ್ಯದರ್ಶಿ ಟಿ.ಎನ್. ತಾರಾ ಅವರು ವಹಿಸಿಕೊಂಡು ನಡೆಸಿಕೊಟ್ಟರು. ಕೊನೆಯಲ್ಲಿ ಕುಟುಂಬಸ್ಥರಿಗೂ, ಬಂಧುಗಳಿಗೂ ಭೋಜನದ ವ್ಯವಸ್ಥೆ ನಡೆದ ಬಳಿಕ ಸಾಂಪ್ರದಾಯಿಕ ವಾಲಗತಾಟ್‍ನೊಂದಿಗೆ ಸಂಭ್ರಮಿಸಿ ಸುವರ್ಣ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.
- ಕೂಡಂಡ ಸಾಬ ಸುಬ್ರಮಣಿ.