ಸುಂಟಿಕೊಪ್ಪ, ಏ. 8: ಸಹವಾಸ ದೋಷದಿಂದ ಆರಂಭವಾಗುವ ಕೆಲವೊಂದು ಅಭ್ಯಾಸಗಳು ಚಟವಾಗಿ ಮಾರ್ಪಟ್ಟು ಚಟ್ಟದವರೆಗೆ ಹೋಗುವವರೆಗೂ ನಮಗೆ ಅರಿವೆ ಆಗುವುದಿಲ್ಲ, ಅಂತಹ ಚಟಗಳಲ್ಲಿ ಮಾದಕ ವಸ್ತುಗಳ ಸೇವನೆ ಮೊದಲ ಸ್ಥಾನದಲ್ಲಿದ್ದು ಅದನ್ನು ಸಂಪೂರ್ಣ ನಿರ್ಮೂಲನೆಗೊಳಿಸಲು ಪಣ ತೊಡುವಂತೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕರೆ ನೀಡಿದರು.

ಸುಂಟಿಕೊಪ್ಪ ಸಲಾಫಿ ಮಸೀದಿ ಆವರಣದಲ್ಲಿ ಕೊಡಗು ಜಿಲ್ಲಾ ವಿಸ್‍ಡಂ ಇಸ್ಲಾಮಿಕ್ ಆರ್ಗನೈಸೇಶನ್ ಸಂಸ್ಥೆ ವತಿಯಿಂದ ಏರ್ಪಡಿಸಲಾಗಿದ್ದ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಸ್ವತಃ ವೈದ್ಯನಾಗಿರುವ ನಾನು ಮಾದಕ ವಸ್ತುಗಳ ಸೇವನೆ ಮತ್ತು ದುಷ್ಪರಿಣಾಮಗಳಿಂದ ಚಿಕಿತ್ಸೆಗೆ ಒಳಗಾಗಿರುವ ಮತ್ತು ಆಸ್ಪತ್ರೆಗೆ ಸೇರಿರುವ ಅನೇಕರನ್ನು ನೋಡಿದ್ದೇನೆ. ದುರಾದೃಷ್ಟಕರ ವಿಚಾರವೆಂದರೇ ಒಂದು ಸಲ ರುಚಿ ನೋಡೊಣ ಎಂದು ಮಾದಕ ವಸ್ತುಗಳ ಸೇವನೆಯನ್ನು ಆರಂಭಿಸಿದರೆ ನಂತರ ಮಾದಕ ವಸ್ತುಗಳೇ ನಮ್ಮನ್ನು ತಿಂದು ಹಾಕುತ್ತವೆ ಎಂದು ಮಾರ್ಮಿಕವಾಗಿ ನುಡಿದರು. ಮಾದಕ ವಸ್ತುಗಳ ಚಟ ದೈಹಿಕವಾಗಿ ಮತ್ತು ಮಾನಸಿಕವಾಗಿ ನಮ್ಮನ್ನು ಅವುಗಳ ದಾಸರನ್ನಾಗಿಸಿ ಮಾಡಿ ಬಿಡುತ್ತವೆ. ಸಣ್ಣದಾಗಿ ಶುರುವಾಗುವ ಈ ಅಭ್ಯಾಸವು ಬೃಹತ್ ಕಾಯಿಲೆಯಾಗಿ ಮಾರ್ಪಟ್ಟು ಕುಟುಂಬ ಕಂಟಕವಾಗಿ ಪರಿಣಮಿಸಿ ವಿನಾಶಕ್ಕೆ ನಾಂದಿ ಹಾಡುತ್ತದೆ. ಎಂದರು. ಪೋಷಕರು, ಶಿಕ್ಷಕರು, ಸಮಾಜ ಸೇವಕರು ಮತ್ತು ಪೊಲೀಸರು ಈ ಬಗ್ಗೆ ತೀವ್ರ ನಿಗಾವಹಿಸಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದ ಕುಶಾಲನಗರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಪಿ ಶಶಿಧರ್ ಮಾತನಾಡಿ, ಈ ಹಿಂದೆ ಅವಿಭಕ್ತ ಕುಟುಂಬಗಳಿದ್ದು, ಮಕ್ಕಳು ಮನೆ ಮಂದಿ ಎಲ್ಲರೂ ಒಟ್ಟಾಗಿ ಕುಟುಂಬದ ಸಾಮರಸ್ಯವನ್ನು ಎತ್ತಿ ಹಿಡಿಯುತ್ತಿದ್ದರು. ಆದರೆ ಪ್ರಸ್ತುತ ದಿನಗಳಲ್ಲಿ ಅಸಾಮಾನ್ಯ ಬದಲಾವಣೆಗಳನ್ನು ಕಾಣುತ್ತಿದ್ದೇವೆ ಎಂದರು. ಸಮಾಜದಲ್ಲಿ ರೌಡಿಶೀಟರ್‍ಗಳು, ಕೊಲೆಗಡುಕರು, ಇನ್ನಿತರ ಸಮಾಜಘಾತುಕ ಕಾರ್ಯಗಳಲ್ಲಿ ತೊಡಗಿರುವವರು ಸನ್ಮಾನ, ಜೈಕಾರ ಮತ್ತು ಸಮಾಜ ಸುಧಾರಕರೆಂದು ಬಿಂಬಿಸಲ್ಪಡುತ್ತಿದ್ದಾರೆ ಎಂದು ಶಶಿಧರ್ ವಿಷಾದಿಸಿದರು. ಕಾರ್ಯಕ್ರಮದಲ್ಲಿ ಉಸೈನ್ ಶಾಲಾಫಿ ಶಾರ್ಜ, ಶಿಯಾಬ್ ಎಡತ್ತಾರ, ಡಾ. ಅಬ್ದುಲಾ ಬಸಿಲ್, ಅನಿಲ್ ತಲಪಾಡಿ ಮುಖ್ಯ ಭಾಷಣಕಾರರಾಗಿ ‘ಡ್ರಗ್ಸ್ ಮುಕ್ತರಾಗೋಣ, ನಮ್ಮ ಕುಟುಂಬಗಳನ್ನು ರಕ್ಷಿಸೋಣ’ ಎಂಬ ವಿಷಯದ ಮೇರೆ ಪ್ರವಚನಗಳನ್ನು ನೀಡಿದರು. ಕಾರ್ಯಕ್ರಮದ ಸಂಘಟಕರಾದ ಶಬ್ಬೀರ್, ಹೆಚ್.ಯು ರಫೀಕ್ ಖಾನ್ ಅವರುಗಳು ಡಾ. ಮಂತರ್ ಗೌಡ ಮತ್ತು ವಿ.ಪಿ. ಶಶಿಧರ್ ಅವರನ್ನು ಗೌರವಿಸಿದರು. ವೇದಿಕೆಯಲ್ಲಿ ವಿಸ್‍ಡಂ ಇಸ್ಲಾಮಿಕ್ ಆರ್ಗನೈಸೇಶನ್ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸ್ವಯಂ ಸೇವಕರು ಪಾಲ್ಗೊಂಡಿದ್ದರು.