ಮಡಿಕೇರಿ ಏ. 8: ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ಅವರ ಹೆಸರಿನಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಅಧಿಕಾರಿಗೆ ಶಾಸಕ ಡಾ. ಮಂತರ್ ಗೌಡ ಸಲಹೆ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಗಾಂಧಿಭವನದಲ್ಲಿ ನಡೆದ ಹಸಿರುಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್ ರಾಂ ಅವರ 119ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಕುಶಾಲನಗರದಲ್ಲಿ ಬಾಬೂಜಿ ಹೆಸರಿನಲ್ಲಿ ವೃತ್ತ ನಿರ್ಮಾಣಕ್ಕೆ ಮುಂದಾಗಲಾಗಿದೆ. ಹಾಗೆಯೇ ಬಾಬು ಜಗಜೀವನ್ ರಾಮ್ ಹೆಸರಿನಲ್ಲಿ ಹಲವು ಸ್ಮರಣೀಯ ಕಾರ್ಯಗಳು ಆಗಬೇಕು ಎಂದು ಶಾಸಕರು ತಿಳಿಸಿದರು. ಆಹಾರ ಮತ್ತು ಕೃಷಿ ಸಚಿವರಾಗಿ ರಾಷ್ಟ್ರದಲ್ಲಿ ಹಸಿರು ಕ್ರಾಂತಿಯನ್ನು ನಿರ್ಮಿಸಿದ ಕೀರ್ತಿ ಬಾಬು ಜಗಜೀವನ್ ರಾಮ್ ಅವರಿಗೆ ಸಲ್ಲುತ್ತದೆ ಎಂದು ಶಾಸಕರು ನುಡಿದರು. ರಕ್ಷಣಾ ಸಚಿವರಾಗಿ ಉತ್ತಮ ಕೆಲಸ, ಕಾರ್ಮಿಕ ಸಚಿವರಾಗಿ ದುಡಿಯುವ ವರ್ಗದ ಹಿತರಕ್ಷಣೆ, ಸಮಾಜದ ಶೋಷಿತ ಸಮುದಾಯಗಳ ಧ್ವನಿಯಾಗಿದ್ದ ರಾಷ್ಟ್ರದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಂ ಅವರ ಜೀವನ ಸಾಧನೆಗಳು ದಾಖಲೆಯಾಗಿದ್ದು, ಸ್ಮರಣೀಯವಾಗಿದೆ ಎಂದು ಡಾ. ಮಂತರ್ ಗೌಡ ಅವರು ವಿವರಿಸಿದರು.
ಕೊಡ್ಲಿಪೇಟೆಯ ಎಪಿಜೆ ಅಬ್ದಲ್ ಕಲಾಂ ವಸತಿ ಶಾಲೆಯ ಪ್ರಾಂಶುಪಾಲ ಡಾ. ಕೆ ಗುರುಸ್ವಾಮಿ ಅವರು ಮಾತನಾಡಿ, ಬಾಬು ಜಗಜೀವನ್ ರಾಂ ಅವರು ದೀರ್ಘ ಕಾಲ ಕೇಂದ್ರ ಸರ್ಕಾರದಲ್ಲಿ ಕೃಷಿ, ರಕ್ಷಣೆ, ಕಾರ್ಮಿಕ, ಹೀಗೆ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು. ರಾಷ್ಟ್ರದ ಪ್ರಗತಿಯಲ್ಲಿ ಪ್ರತಿಯೊಬ್ಬರ ಪ್ರಗತಿಯಿದೆ ಎಂದು ಹೇಳುತ್ತಿದ್ದ ಬಾಬು ಜಗಜೀವನ್ ರಾಂ ಅವರು ದೇಶಕ್ಕೆ ಮಾದರಿ ಮತ್ತು ಅನುಕರಣೀಯ ರಾಜಕಾರಣಿ ಎಂದು ನುಡಿದರು. ರೈಲ್ವೆ ಹಾಗೂ ಸಂವಹನ ಸಚಿವರಾಗಿ ಸೇವೆ ಸಲ್ಲಿಸಿದ್ದ ಅವರು ಪ್ರತೀ ಇಲಾಖೆಯ ಸಚಿವರಾದಾಗಲು ತಮ್ಮದೇ ಆದ ಛಾಪು ಮೂಡಿಸಿದ ಕೀರ್ತಿ ಡಾ.ಬಾಬು ಜಗಜೀವನ್ ರಾಂ ಅವರಿಗೆ ಸಲ್ಲುತ್ತದೆ ಎಂದರು.
ನಗರಸಭೆ ಅಧ್ಯಕ್ಷೆ ಪಿ. ಕಲಾವತಿ ಮಾತನಾಡಿ, ಬಾಬು ಜಗಜೀವನ್ ರಾಮ್ ಅವರ ಬಾಲ್ಯ, ವಿದ್ಯಾಭ್ಯಾಸ, ರಾಜಕೀಯ ಕ್ಷೇತ್ರದಲ್ಲಿನ ಬೆಳವಣಿಗೆ ಕುರಿತು ಮಾತನಾಡಿದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಜಿ.ಪಂ. ಸಿಇಓ ಆನಂದ್ ಪ್ರಕಾಶ್ ಮೀನಾ, ತಹಶೀಲ್ದಾರ್ ಶ್ರೀಧರ, ಪ್ರಮುಖರಾದ ಹೆಚ್.ಎಲ್. ದಿವಾಕರ, ಜನಾರ್ದನ, ಪ್ರೇಮ ಕೃಷ್ಣಪ್ಪ, ಮೋಹನ್ ಮೌರ್ಯ, ಗಾಯತ್ರಿ, ದೀಪಕ್ ಪೆÇನ್ನಪ್ಪ, ಪ್ರಸನ್ನ, ಮಹದೇವ, ಸಿದ್ದೇಶ್ವರ, ವೀರೇಂದ್ರ, ಲೋಕೋಪಯೋಗಿ ಇಇ ಪ್ರಭು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇತರರು ಇದ್ದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಸ್ವಾಗತಿಸಿದರು, ಪವನ್ ಕುಮಾರ್ ನಿರೂಪಿಸಿದರು, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಬಾಲಕೃಷ್ಣ ರೈ ವಂದಿಸಿದರು.