ಕುಶಾಲನಗರ, ಏ. 7: ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕಾಗಿದೆ ಎಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಹೇಳಿದರು.

ಕುಶಾಲನಗರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಕುಶಾಲನಗರ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ಬಾಬು ಜಗಜೀವನ್ ರಾಂ ಅವರ 119ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ತಮ್ಮ ಶಾಲಾ ದಿನಗಳಿಂದಲೇ ತಾರತಮ್ಯದ ವಿರುದ್ಧ ಹೋರಾಟ ನಡೆಸಿದವರು ಬಾಬು ಜಗಜೀವನ್ ರಾಮ್. ಅವರ ಜನ್ಮದಿನವನ್ನು ಸಮಾನತೆಯ ದಿನವಾಗಿ ಆಚರಣೆ ಮಾಡುತ್ತಿರುವುದು ಸಂತಸದ ವಿಚಾರ. ರೈತರ ಬೆನ್ನೆಲುಬಾಗಿ, ಹಸಿರು ಕ್ರಾಂತಿಯ ಹರಿಕಾರರಾಗಿ, ಗಾಂಧೀಜಿಯವರ ಒಡನಾಟದಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕೋಸ್ಕರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ, ಮೇರು ವ್ಯಕ್ತಿತ್ವದ ಬಾಬು ಜಗಜೀವನ್ ರಾಮ್ ಇಂದಿನ ಸಮಾಜಕ್ಕೆ ಆದರ್ಶಪ್ರಾಯ ವ್ಯಕ್ತಿಗಳಾಗಿದ್ದಾರೆ ಎಂದರು.

ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಸಾಲಿಗ್ರಾಮದ ಉಪನ್ಯಾಸಕ ನಾಗರಾಜ್ ಬೀಜಗನಹಳ್ಳಿ ಮಾತನಾಡಿ, ಶೋಷಿತ ಸಮಾಜದ ಧ್ವನಿಯಾಗಿ, ಸಾಮಾಜಿಕ ಪರಿವರ್ತನೆಯ ಗಾಳಿ ಎಬ್ಬಿಸಿದವರು, ಶೋಷಿತ ಸಮಾಜವನ್ನು ಜಾಗೃತಿಯ ಕಡೆ ಕೊಂಡೊಯ್ದು ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಕಾರಣರಾದವರು ಡಾ. ಬಾಬು ಜಗಜೀವನ್ ರಾಮ್ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುμÁ್ಠನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಸಮಾನತೆಯ ಸಮಾಜ ನಿರ್ಮಾಣ ಚಿಂತನೆಯೊಂದಿಗೆ ಭಾರತದ ಅಮೂಲಾಗ್ರ ಬದಲಾವಣೆ, ಅಭಿವೃದ್ಧಿಯಲ್ಲಿ ಜಗಜೀವನರಾಂ ಅವರ ಕೊಡುಗೆ ಅಪಾರವಿದೆ. ಇಂತಹ ಮಹನೀಯರ ಸ್ಮರಣೆ ಬಗ್ಗೆ ಯಾರೂ ಕೂಡ ಕಡೆಗಣನೆ ಮಾಡಬಾರದು ಎಂದರು.

ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಾಕೇಶ್, ಪುರಸಭೆ ಆರೋಗ್ಯ ನಿರೀಕ್ಷಕ ಉದಯಕುಮಾರ್, ವಿವಿಧ ಸಂಘಟನೆಗಳ ಮುಖಂಡರಾದ ದಾಮೋದರ್, ವೆಂಕಟೇಶ್, ಲೋಕೇಶ್ ಕುಂಡಾರಿ, ಹೆಚ್.ಟಿ. ವಸಂತ, ಡಾ. ಹರ್ಷಿತ, ಗಂಗಾಧರ, ಸಮಾಜ ಕಲ್ಯಾಣ ತಾಲೂಕು ಸಹಾಯಕ ನಿರ್ದೇಶಕ ಸಿದ್ದೇಗೌಡ, ವಾರ್ಡನ್ ಮಧು ಸೇರಿದಂತೆ ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಇದ್ದರು.