ಮಡಿಕೇರಿ, ಏ.6: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಾ. 17 ರಂದು ಕೊಡಗು ಜಿಲ್ಲೆಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಲೈನ್‍ಮನೆಗಳಲ್ಲಿ ವಾಸ ಮಾಡುತ್ತಿರುವ ಪರಿಶಿಷ್ಟ ಪಂಗಡದವರಿಗೆ ನಿವೇಶನ ಹಕ್ಕುಪತ್ರ ವಿತರಿಸುವುದರ ಜೊತೆಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಭೂಮಿ ಪೂಜೆ ನೆರವೇರಿಸುವ ಸಾಧ್ಯತೆ ಇದೆ. ಆದ್ದರಿಂದ ವಿವಿಧ ಇಲಾಖೆಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು.
ಲೈನ್‍ಮನೆಗಳಲ್ಲಿ ವಾಸಿಸುವ ನಿವೇಶನ ರಹಿತ ಕುಟುಂಬದವರ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಆದರೂ ಸಹ ಕೆಲವು ಕುಟುಂಬದವರ ಸಮರ್ಪಕ ಮಾಹಿತಿ ಲಭ್ಯ ಇಲ್ಲದಿರುವ ಹಿನ್ನೆಲೆ ಸಂಬಂಧಪಟ್ಟ ಗ್ರಾಮಕ್ಕೆ ತೆರಳಿ ಆಧಾರ್ ಕಾರ್ಡ್ ಮಾಡಿಸುವುದು ಹಾಗೆಯೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಗ್ರ ಗಿರಿಜನ ಕಲ್ಯಾಣ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಎಸ್.ಹೊನ್ನೇಗೌಡ ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾ.ಪಂ.ವ್ಯಾಪ್ತಿಯಲ್ಲಿ 124 ನಿವೇಶನ ಗುರುತಿಸಲಾಗಿದ್ದು, 116 ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಹಾಗೆಯೇ ಪೊನ್ನಂಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾ.ಪಂ. ವ್ಯಾಪ್ತಿಯ ಬಾಳುಗೋಡು ಗ್ರಾಮದಲ್ಲಿ 53 ನಿವೇಶನ ಗುರುತಿಸಲಾಗಿದ್ದು, 37 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ವೀರಾಜಪೇಟೆ ತಾಲೂಕಿನ ಹೊಸೂರು ಗ್ರಾ.ಪಂ.ವ್ಯಾಪ್ತಿಯ ಕಳತ್ಮಾಡು ಗ್ರಾಮದಲ್ಲಿ 110 ನಿವೇಶನ ಗುರುತಿಸಲಾಗಿದ್ದು, 127 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.
ಪೊನ್ನಂಪೇಟೆ ತಾಲೂಕಿನ ಬಿರುನಾಣಿ ಗ್ರಾ.ಪಂ.ವ್ಯಾಪ್ತಿಯ ಬಿರುನಾಣಿ ಗ್ರಾಮದಲ್ಲಿ 448 ನಿವೇಶನ ಗುರುತಿಸಲಾಗಿದ್ದು, 621 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಶ್ರೀಮಂಗಲ ಗ್ರಾ.ಪಂ.ವ್ಯಾಪ್ತಿಯ ಕುರ್ಚಿ ಗ್ರಾಮದಲ್ಲಿ 190 ನಿವೇಶನ ಗುರುತಿಸಲಾಗಿದ್ದು, 224 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 38 ಎಕರೆ ಜಾಗ ಗುರುತಿಸಲಾಗಿದ್ದು, 925 ನಿವೇಶನದಲ್ಲಿ 1125 ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ವಿತರಿಸಬೇಕಿದೆ.
ಈಗಾಗಲೇ ಗುರುತಿಸಲಾಗಿರುವ ಫಲಾನುಭವಿಗಳು ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಪರಿಶಿಷ್ಟ ವರ್ಗಗಳ ಇಲಾಖೆ ಮೂಲಕ ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆ ನಿರ್ಮಿಸಿಕೊಡಲು ಮುಂದಾಗಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೀರಾಜಪೇಟೆ-ಪೊನ್ನಂಪೇಟೆ ತಾ.ಪಂ.ಇಒ ಅಪ್ಪಣ್ಣ ಮತ್ತು ತಹಶೀಲ್ದಾರ್ ಪ್ರವೀಣ್ ಕುಮಾರ್ ಅವರು ಕೆಲವು ಕುಟುಂಬಗಳ ಬಳಿ ಆಧಾರ್ ಕಾರ್ಡ್ ಇರುವುದಿಲ್ಲ. ಇದರಿಂದಾಗಿ ಜಾತಿ ಪ್ರಮಾಣ ಮತ್ತು ಆದಾಯ ಪ್ರಮಾಣ ಪತ್ರ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇಲ್ಲವೆಂದು ಹಲವು ಸಭೆಗಳಲ್ಲಿ ಹೇಳಿಕೊಂಡು ಬರಲಾಗಿದೆ. ಇದು ಸಮರ್ಪಕ ಉತ್ತರವಲ್ಲ. ಆದ್ದರಿಂದ ಕೆದಮುಳ್ಳೂರು, ಬಾಳುಗೋಡು, ಕುರ್ಚಿ, ಬಿರುನಾಣಿ ಗ್ರಾಮಗಳಿಗೆ ಭೇಟಿ ನೀಡಿ ಆಧಾರ್ ಶಿಬಿರ ಏರ್ಪಡಿಸಬೇಕು. ಜೊತೆಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಬೇಕು. ಈ ಕಾರ್ಯವು ಒಂದೆರಡು ದಿನದಲ್ಲಿ ಆಗಬೇಕು ಎಂದು ತಾಕೀತು ಮಾಡಿದರು.
ಈ ಸಂಬಂಧ ಜಿ.ಪಂ.ಸಿಇಒ ಅವರ ಜೊತೆಗೂಡಿ ಆಧಾರ್ ಶಿಬಿರಕ್ಕೆ ಖುದ್ದಾಗಿ ಭೇಟಿ ನೀಡಲಾಗುವುದು. ಯಾವುದೇ ರೀತಿಯ ಸಬೂಬು ಹೇಳುವಂತಿಲ್ಲ ಎಂದು ಹೇಳಿದರು.
ಕಂದಾಯ, ತಾಲೂಕು ಪಂಚಾಯಿತಿ ಮತ್ತು ಐಟಿಡಿಪಿ ಹೀಗೆ ಎಲ್ಲಾ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಇದೊಂದು ಸರ್ಕಾರಿ ಕೆಲಸವಾಗಿದ್ದು, ಪ್ರಗತಿ ಸಾಧಿಸುವಂತೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಐಟಿಡಿಪಿ ಇಲಾಖಾ ಅಧಿಕಾರಿ ಎಸ್.ಹೊನ್ನೇಗೌಡ ಅವರು ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ತೆರಾಲು, ಬಿ.ಶೆಟ್ಟಿಗೇರಿ ಗ್ರಾ.ಪಂ.ವ್ಯಾಪ್ತಿಯ ಬಿ.ಶೆಟ್ಟಿಗೇರಿ ವ್ಯಾಪ್ತಿಯಲ್ಲಿನ ನಿವೇಶನ ರಹಿತ ಪರಿಶಿಷ್ಟ ಪಂಗಡ ಕುಟುಂಬಗಳಿಗೆ ನಿವೇಶನ ಕಲ್ಪಿಸುವ ಸಂಬಂಧ ಜಾಗದ ಸಮಸ್ಯೆ ಇದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಬಿ.ಶೆಟ್ಟಿಗೇರಿ ಗ್ರಾ.ಪಂ.ವ್ಯಾಪ್ತಿಯ ಬಿ.ಶೆಟ್ಟಿಗೇರಿಯಲ್ಲಿ 6 ಎಕರೆ ಭೂಮಿಯನ್ನು ತಾ.ಪಂ.ಇಒ ಅವರ ಹೆಸರಿಗೆ ಕಾಯ್ದಿರಿಸಲಾಗಿದೆ. ಬಿ.ಶೆಟ್ಟಿಗೇರಿ ಗ್ರಾ.ಪಂ.ನ ಬಿ.ಶೆಟ್ಟಿಗೇರಿಯ ವ್ಯಾಪ್ತಿಯಲ್ಲಿ 2.60 ಎಕರೆ ಭೂಮಿ ಐಟಿಡಿಪಿ ಇಲಾಖೆಗೆ ಹಸ್ತಾಂತರವಾಗಿಲ್ಲ. ತೆರಾಲು ಗ್ರಾಮ ವ್ಯಾಪ್ತಿಯಲ್ಲಿ 20 ಎಕರೆ ಭೂಮಿ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಒಳಪಡಲಿದೆ. ಇದರಿಂದ ಜಾಗದ ಸಮಸ್ಯೆ ಇದೆ ಎಂದು ಹೇಳಿದರು.
ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಮಾತನಾಡಿ ತಾ.ಪಂ.ಇಒ ಮತ್ತು ತಹಶೀಲ್ದಾರರು ಹಾಗೆಯೇ ಪಿಡಿಒ ಗಳು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು, ಬಿಲ್ಲು ಕಲೆಕ್ಟರ್‍ಗಳು, ಗ್ರಾಮ ಸಹಾಯಕರು ಹೀಗೆ ಎಲ್ಲರೂ ಸಹ ಫಲಾನುಭವಿಗಳನ್ನು ಪತ್ತೆ ಹಚ್ಚಬೇಕು. ಜಾತಿ ಮತ್ತು ಆದಾಯ ಹಾಗೂ ಆಧಾರ್ ಕಾರ್ಡ್ ಮಾಡಿಸುವಂತಾಗಬೇಕು ಎಂದು ಸೂಚಿಸಿದರು. ತಾ.ಪಂ.ಇಒ ಶೇಖರ್, ಜಿ.ಪಂ.ಉಪ ಕಾರ್ಯದರ್ಶಿ ಜೀವನ್ ಕುಮಾರ್, ಪೊನ್ನಂಪೇಟೆ ತಹಶೀಲ್ದಾರ್ ಸಂಜನಾ, ರಾಜೀವ್ ಗಾಂಧಿ ವಸತಿ ನಿಗಮದ ಇಂಜಿನಿಯರ್ ಅಕ್ರಂ ಪಾಷಾ ಮಾತನಾಡಿದರು.