ಮಡಿಕೇರಿ, ಏ. 6 : ನಗರದ ಕಲಾಕಾವ್ಯ ನಾಟ್ಯ ಶಾಲೆ ವತಿಯಿಂದ ತಾ. 8 ರಂದು (ನಾಳೆ) ಮೈತ್ರಿ ಸಭಾಂಗಣದಲ್ಲಿ ಕಲಾಕಾವ್ಯ ಯಕ್ಚಗಾನ ವೈಭವ 2026 ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಪ್ರಯುಕ್ತ ಮಕ್ಕಳಿಂದ ಶ್ರೀದೇವಿ ಮಹಾತ್ಮೆ ಹಾಗೂ ವೀರ ಅಭಿಮನ್ಯು ಎಂಬ ಯಕ್ಷಗಾನ ಕಥಾ ಬಯಲಾಟ ಆಯೋಜಿಸಲಾಗಿದೆ ಎಂದು ಕಲಾಕಾವ್ಯ ನಾಟ್ಯಶಾಲೆಯ ನೃತ್ಯಗುರು ಕಾವ್ಯಶ್ರೀ ಕಪಿಲ್ ದುಗ್ಗಳ ತಿಳಿಸಿದ್ದಾರೆ. ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಯಕ್ಷಗಾನ ಕಥಾ ಬಯಲಾಟ ಸ್ಥಳೀಯ ಮಕ್ಕಳಿಂದಲೇ ನಡೆಯಲಿದ್ದು, ಇದಕ್ಕಾಗಿ ಸುಮಾರು 40 ಮಕ್ಕಳಿಗೆ ಆರು ತಿಂಗಳ ಕಾಲ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ. 38 ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಯಕ್ಷಗಾನ ಕಥಾಬಯಲಾಟದಲ್ಲಿ ಭಾಗವಹಿಸಲಿದ್ದಾರೆ. ತಾ. 8 ರಂದು ಮಧ್ಯಾಹ್ನ 1 ಗಂಟೆಗೆ ಕಾರ್ಯಕ್ರಮವನ್ನು ಯಕ್ಷಗಾನ ಗುರುಗಳಾದ ಬಾಲಕೃಷ್ಣ ನಾಯರ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಆಕಾಶವಾಣಿಯ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ, ಸವಣೂರು ಶ್ರವಣರಂಗ ಪ್ರತಿಷ್ಠಾನದ ಯಕ್ಷಗಾನ ಗುರುಗಳಾದ ತಾರಾನಾಥ್ ಸವಣೂರು, ಮಡಿಕೇರಿ ಬಾಲಭವನದ ಅಧ್ಯಕ್ಷ ರವೀಂದ್ರ ರೈ ಪಾಲ್ಗೊಳ್ಳಲಿದ್ದಾರೆ. ಈ ಯಕ್ಷಗಾನ ಬಯಲಾಟ ವೀಕ್ಷಣೆಗೆ ಉಚಿತ ಪ್ರವೇಶವಿರುತ್ತದೆ ಎಂದು ಕಾವ್ಯಶ್ರೀ ಕಪಿಲ್ ದುಗ್ಗಳ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಶಾಲೆಯ ವಿದ್ಯಾರ್ಥಿ ಹಾಗೂ ಪೋಷಕಿ ಡಾ. ಶೈಲಾಶ್ರೀ, ವಿದ್ಯಾರ್ಥಿಗಳಾದ ಚಂದ್ರವತಿ, ಎ. ಇಂಚರ, ಪೋಷಕರಾದ ಪ್ರೀತು ಗಯಾ, ಗಾನಶ್ರೀ ನಿಡ್ಯಮಲೆ ಉಪಸ್ಥಿತರಿದ್ದರು.