ಸೋಮವಾರಪೇಟೆ, ಏ. 6 : ಉತ್ತರ ಕೊಡಗಿನ ಪುಷ್ಪಗಿರಿ ಬೆಟ್ಟಶ್ರೇಣಿ ಗ್ರಾಮಗಳಲ್ಲಿ ಸಾಂಪ್ರದಾಯಿಕ ಆಚರಣೆಗಳ ಮೂಲಕ ಸುಗ್ಗಿ ಉತ್ಸವಗಳು ನಡೆಯುತ್ತಿದ್ದು, ಸಮೀಪದ ನಗರಳ್ಳಿ ಗ್ರಾಮದಲ್ಲಿ ಇಂದು ನಡೆದ ಕೂತಿನಾಡು ಸುಗ್ಗಿ ಉತ್ಸವ ಸಾಂಪ್ರದಾಯಿಕ ಸೊಡಗನ್ನು ಸಾಕ್ಷೀಕರಿಸಿತು.

ಗ್ರಾಮದ ಸುಭೀಕ್ಷೆಗೆ ಪ್ರಾರ್ಥಿಸುವ ಮೂಲಕ ಬರ ಪರಿಸ್ಥಿತಿಯನ್ನು ದೂರಾಗಿಸಿ, ಉತ್ತಮ ಮಳೆ ಬೆಳೆಯ ಮೂಲಕ ನಾಡಿಗೆ ನೆಮ್ಮದಿ ತರುವಂತೆ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಗ್ರಾಮ ದೇವತೆ ಶ್ರೀ ಸಬ್ಬಮ್ಮ ತಾಯಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಕೂತಿನಾಡಿಗೆ ಸೇರಿದ 18 ಗ್ರಾಮಗಳ ನಿವಾಸಿಗಳು ನಗರಳ್ಳಿ ಸುಗ್ಗಿಕಟ್ಟೆಯಲ್ಲಿ ಸೇರಿ ಗ್ರಾಮ ದೇವತೆ ಸಬ್ಬಮ್ಮ ದೇವಿಗೆ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಗ್ರಾಮದೇವತೆ ಸಬ್ಬಮ್ಮ ದೇವಿಗೆ 15ದಿನಗಳ ಕಾಲ ವಿಶೇಷ ಪೂಜೆಗಳನ್ನು ಸಲ್ಲಿಸಿ, ಗ್ರಾಮ ಸುಭೀಕ್ಷೆಗೆ ಬೇಡಿಕೆ ಹಾಗೂ ಮಳೆ, ಬೆಳೆ ಸಮೃದ್ಧಿಗಾಗಿ ಪ್ರಾರ್ಥನೆ ಮಾಡುವ ಮೂಲಕ ಪ್ರಸಕ್ತ ಸಾಲಿನ ಸುಗ್ಗಿ ಉತ್ಸವವನ್ನು ಆಚರಿಸಲಾಯಿತು.

ತಲೆತಲಾಂತರಗಳಿಂದ ಗ್ರಾಮೀಣ ಭಾಗದಲ್ಲಿ ಸುಗ್ಗಿ ಉತ್ಸವವನ್ನು ಅನೂಚಾನವಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ಗ್ರಾಮದ ನಿವಾಸಿಗಳು, ಮಹಿಳೆಯರು, ಮಕ್ಕಳು, ಹಿರಿಯರು ಉತ್ಸವದಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥಗಳ ನೆರವೇರಿಕೆಗೆ ಗ್ರಾಮ ದೇವತೆಯಲ್ಲಿ ಪ್ರಾರ್ಥಿಸಿದರು. ಅದರಲ್ಲೂ ಕುಟುಂಬ ಸಮೇತ ತವರಿನ ಸುಗ್ಗಿಯಲ್ಲಿ ಭಾಗವಹಿಸುವ ಮೂಲಕ ಸಂಭ್ರಮದಿಂದ ಸುಗ್ಗಿಯಲ್ಲಿ ಪಾಲ್ಗೊಂಡರು.

ಸುಗ್ಗಿ ಉತ್ಸವದ ಸೋಮವಾರ ಸುಗ್ಗಿ ದೇವರ ಬನದಲ್ಲಿ ಅಳವಡಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ 4 ಮಂದಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ತೂಗುವ ಸುಗ್ಗಿಯ ಕ್ಷಣಗಳು ಎಲ್ಲರಲ್ಲೂ ಭಕ್ತಿಯ ಪರಾಕಾಷ್ಠೆ ತುಂಬುವಂತೆ ಮಾಡಿತು.

ಬೆಳ್ಳಿಗ್ಗೆ ಸುಗ್ಗಿಬನದ ಸಮೀಪವಿರುವ ಬಿಲ್ಲೆ ರಂಗದಲ್ಲಿ ಪೂರ್ವಜರ ಜೀವನ ಪದ್ದತಿಯನ್ನು ಬಿಂಬಿಸುವ ನೃತ್ಯ ಪ್ರಾಕಾರವನ್ನು ಗ್ರಾಮಸ್ಥರು ಅಭಿನಯಿಸಿದರು. ಅದರಲ್ಲೂ ಕಡವೆ ಬೇಟೆಯ ದೃಷ್ಟಾಂತಗಳು ಸಾಂಪ್ರದಾಯಿಕ ಆಚರಣೆಯ ಗತಕಾಲದ ನೆನಪುಗಳು ಮರುಕಳಿಸುವಂತೆ ಮಾಡಿತು.

ಸಾಂಪ್ರದಾಯಿಕ ಬಿಳಿ ಕುಪ್ಪಸ ದಟ್ಟಿಯನ್ನು ಧರಿಸಿದ್ದ ಗ್ರಾಮದ ಹಿರಿಯರು, ಬಿಲ್ಲೆರಂಗದಲ್ಲಿ ಪ್ರದರ್ಶನ ಹಾಕುತ್ತ, ಮಲೆನಾಡು ಸುಗ್ಗಿ ಇತಿಹಾಸವನ್ನು ನೆರದಿದ್ದವರಿಗೆ ಮನವರಿಕೆ ಮಾಡಿದರು. ಸುಗ್ಗಿ ಕುಣಿತ, ಸುಗ್ಗಿಹಾಡುವದು, ಬಿಲ್ಲು ತೂಗುವದು ಸೇರಿದಂತೆ ವಿವಿಧ ಜಾನಪದ ನೃತ್ಯಗಳು ನಡೆದವು. 18 ಗ್ರಾಮಗಳ ನವ ದಂಪತಿಗಳು ಮದುವೆ ಕಾಣಿಕೆಯನ್ನು ಸಲ್ಲಿಸಿದರು. ಹರಕೆ ತಿರಿಸುವದು ಮತ್ತು ಹರಕೆ ಮಾಡಿಕೊಳ್ಳುವ ಕಾರ್ಯಗಳು ನಡೆದವು.

ಕೂತಿ ನಾಡು ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೀಕಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಹಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ, ಸಕಲೇಶಪುರ ತಾಲೂಕಿನ ಓಡಳ್ಳಿ ಗ್ರಾಮಗಳ ಮುಖ್ಯಸ್ಥರು ಗ್ರಾಮದೇವತೆಗೆ ಪಟ್ಟ ಒಪ್ಪಿಸಿ, ಸಾಮೂಹಿಕ ಪೂಜೆ ನೆರವೇರಿಸಿದರು.

ರಾಜರಕಾಲದ ಕತ್ತಿಗಳಿಗೆ ವಿಶೇಷ ಪೂಜೆ, ಸಂಪ್ರದಾಯದಂತೆ ವೀಳ್ಯದೆಲೆ ಸತ್ಕಾರ, ಕಂಬತಳೆ ರಂಗದಲ್ಲಿ ಮೀಸಲುಗಾರರಿಗೆ ಸನ್ಮಾನ, ಊಲುಮಣೆ ಮೇಲೆ ಅರ್ಚಕರನ್ನು ಕೂರಿಸಿ ತೂಗುವುದು, ದೇವರ ಪ್ರದಕ್ಷಿಣೆ, ಈಡುಗಾಯಿ, ಬಾಳೆಹಣ್ಣು ಸೇವೆ, ಬಿಲ್ಲೆ ರಂಗದಲ್ಲಿ ಪಟ್ಟ ಒಪ್ಪಿಸುವುದು, ಮಡಿಲು ತುಂಬಿಸುವುದು, ಬಿಲ್ಲು ಕುಣಿತ, ಮಾರುಗೋಲು ತೂಗುವುದು, ಕೊಳವೆ ಒಪ್ಪಿಸುವುದು, ದೇವರ ಕಲ್ಲಿಗೆ ಅರಶಿಣ ಅಕ್ಕಿ ಹಾಕುವ ಸಂಪ್ರದಾಯಿಕ ಪೂಜೆ ನಡೆದು, ಸಾರ್ವಜನಿಕರಿಗೆ ಅನ್ನಪ್ರಸಾದ ವಿತರಣೆ ಜರುಗಿತು. ಸುಗ್ಗಿ ಕಟ್ಟೆಯ ಮುಖ್ಯ ರಂಗದಲ್ಲಿ ಈಡುಗಾಯಿ ಒಡೆಯಲಾಯಿತು. ಭಕ್ತಾದಿಗಳಿಗೆ ಅನ್ನಸಂರ್ಪಣೆ ನಡೆಯಿತು.

ನಗರಳ್ಳಿ ಗ್ರಾಮದ ಶ್ರವಣ್, ಸಂದೀಪ್, ಸವಿನ್, ರಚನ್ ಹಳ್ಳಿಯೂರು, ಗಗನ್ ಜಕ್ಕನಳ್ಳಿ, ಶಶಿಕುಮಾರ್ ಹೆಮ್ಮನಗದ್ದೆ, ದೇವರ ಒಡೆಕಾರರಾಗಿ ಕಾರ್ಯ ನಿರ್ವಹಿಸಿದರು. ರಮೇಶ್, ಪ್ರಕಾಶ್, ಪ್ರಸನ್ನ, ಕುಶಾಲ್, ಲೋಹಿತ್, ದೇವರ ಸೇವೆಕರಾಗಿ ಶ್ರದ್ಧೆಯಿಂದ ಕಾರ್ಯನಿರ್ವಹಿಸಿದರು.

ಕೂತಿನಾಡು ಶ್ರೀ ಸಬ್ಬಮ್ಮ ದೇವರ ಸಮಿತಿ ಅಧ್ಯಕ್ಷರಾದ ಕೆ.ಬಿ. ಜಗದೀಶ್, ಉಪಾಧ್ಯಕ್ಷರಾದ ಸಿ. ಎಸ್.ಬೋಪಯ್ಯ, ಕಾರ್ಯದರ್ಶಿ ಕೆ. ಯು. ಜಗದೀಶ್, ಖಜಾಂಚಿ ಎನ್.ಬಿ.ಸುರೇಶ್, ನಿರ್ದೇಶಕರಾದ ಬಿ.ಪಿ. ಪ್ರದೀಪ್ ಕುಮಾರ್, ಜಿ. ಆರ್. ಸುರೇಶ್, ರಜಿತ್, ಅಶ್ವತ್ ಕೆ.ಎಂ, ಕೌಶಿಕ್, ಪ್ರಸನ್ನ ಸುಗ್ಗಿಯ ಉಸ್ತುವಾರಿ ವಹಿಸಿದ್ದರು.

ನಗರಳ್ಳಿ ಗ್ರಾಮದ ಮೂಲ ದೇವಾಲಯ ನಿರ್ಮಾಣಕ್ಕೆ 10 ಲಕ್ಷ ರೂ.ಗಳ ಧನ ಸಹಾಯ ಮಾಡಿದ ಉದ್ಯಮಿ ಹಾಗು ಚಲನಚಿತ್ರ ನಟ ನಗರಳ್ಳಿ ಅರುಣ್ ಗೌಡ ಹಾಗು ಸುಗ್ಗಿ ಬನ ಅಭಿವೃದಿಗ್ಧೆ 10 ಲಕ್ಷ ರೂ.ಗಳ ಅನುದಾನವನ್ನು ಸರ್ಕಾರದಿಂದ ಕಲ್ಪಿಸಿದ ಶಾಸಕ ಡಾ.ಮಂತರ್‍ಗೌಡ ಅವರುಗಳನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಅಪ್ಪಚ್ಚು ರಂಜನ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ಮಾಜಿ ಎಂಎಲ್‍ಸಿ ಎಸ್.ಜಿ.ಮೇದಪ್ಪ ಮತ್ತಿತರ ಗಣ್ಯರು ಸುಗ್ಗಿ ಉತ್ಸವದಲ್ಲಿ ಭಾಗವಹಿಸಿದ್ದರು. -ವಿಜಯ್ ಹಾನಗಲ್