ಗೋಣಿಕೊಪ್ಪಲು, ಏ. 6: ದಕ್ಷಿಣ ಕೊಡಗಿನ ಬಾಳೆಲೆಯ ವಿಜಯಲಕ್ಷ್ಮಿ ಜೂನಿಯರ್ ಕಾಲೇಜ್ ಮೈದಾನದಲ್ಲಿ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ 20 ದಿನಗಳ ಹಾಕಿ ಬೇಸಿಗೆ ಶಿಬಿರವು ನಿವೃತ್ತ ಲೆ.ಕರ್ನಲ್ ಒಲಂಪಿಯನ್ ಬಾಳೆಯಡ ಕೆ.ಸುಬ್ರಮಣಿ ಮುಂದಾಳತ್ವದಲ್ಲಿ ಆರಂಭಗೊಂಡಿದೆ. ಬೇಸಿಗೆ ಶಿಬಿರಕ್ಕೆ ಭಾರತ ತಂಡದ ಮಾಜಿ ನಾಯಕ, ಒಲಂಪಿಯನ್ ವಾಸುದೇವನ್ ಭಾಸ್ಕರನ್, ಸೇನೆಯ ಪ್ಯಾರಾ ಕಮಾಂಡರ್ ಪಾಂಡಂಡ ಭೀಮಯ್ಯ ಆಗಮಿಸುವ ಮೂಲಕ ಭವಿಷ್ಯದ ವಿದ್ಯಾರ್ಥಿಗಳಿಗೆ, ಕ್ರೀಡಾಪಟುಗಳಿಗೆ ಸ್ಫೂರ್ತಿದಾಯಕವಾದರು. ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡಲ್ಲಿ ಎಲ್ಲಾ ರಂಗದಲ್ಲೂ ಸಾಧನೆ ಮಾಡಲು ಸಾಧ್ಯವಿದೆ. ಪ್ರತಿ ಮಕ್ಕಳಲ್ಲಿ ಉತ್ತಮ ಪ್ರತಿಭೆಗಳಿದ್ದು ಇವುಗಳನ್ನು ಹೊರ ಹಾಕಲು ವೇದಿಕೆಗಳು ನಿರ್ಮಾಣವಾಗಬೇಕು. ಭಾರತ ತಂಡದಲ್ಲಿ ಸ್ಥಾನ ಪಡೆಯಲು ಇಂದಿನಿಂದಲೇ ತಮ್ಮ ಕಠಿಣ ಅಭ್ಯಾಸವನ್ನು ಕೈಗೊಳ್ಳುವಂತೆ ಒಲಂಪಿಯನ್ ವಾಸುದೇವನ್ ಭಾಸ್ಕರನ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಹಾಕಿಯ ಬಗ್ಗೆ ವಿದ್ಯಾರ್ಥಿಗಳಿಗೆ ಹಲವು ಉಪಯುಕ್ತ ಮಾರ್ಗಸೂಚಿಗಳನ್ನು ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಭಾರತ ಸೇನೆಯ ಪ್ಯಾರಾ ಕಮಾಂಡರ್ ಪಾಂಡಂಡ ಭೀಮಯ್ಯ ಮಾತನಾಡಿ, ಸೇನೆಯಲ್ಲಿ ವಿವಿಧ ರೀತಿಯ ತರಬೇತಿಗಳು ಲಭಿಸುತ್ತಿವೆ. ತಮಗೆ ಇಷ್ಟ ಇರುವ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಸೇನೆಗೆ ಹೆಚ್ಚಾಗಿ ಸೇರುವಂತಾಗಬೇಕೆಂದರು.
ತಮ್ಮ ಜ್ಞಾನಾರ್ಜನೆ ಹಾಗೂ ದೈಹಿಕವಾಗಿ ಸದೃಢವಾಗಬೇಕು. ಈ ನಿಟ್ಟಿನಲ್ಲಿ ಕ್ರೀಡೆ ಅತಿ ಮುಖ್ಯವಾಗಿದೆ. ಸಮಯ ಪ್ರಜ್ಞೆ ಹಾಗೂ ಶಿಸ್ತನ್ನು ಜೀವನದಲ್ಲಿ ರೂಪಿಸಿಕೊಳ್ಳಬೇಕು. ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿರುವುದು ಆಶಾದಾಯಕ ಬೆಳವಣಿಗೆ ಎಂದು ಬಾಳೆಯಡ ಕೆ.ಸುಬ್ರಮಣಿ ಮಕ್ಕಳಿಗೆ ತಿಳಿಸಿದರು. ಮಕ್ಕಳ ಪೋಷಕರು ನಿರೀಕ್ಷೆಗೂ ಮೀರಿ ಸ್ಪಂದಿಸಿರುವುದು ಉತ್ತಮ ಬೆಳವಣಿಗೆ ಮಕ್ಕಳೊಂದಿಗೆ ಪೋಷಕರು ಹೆಚ್ಚಿನ ಸಮಯ ಕಳೆಯುವಂತಾಗಬೇಕು ಆ ಮೂಲಕ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುವಂತಾಗಲು ಶ್ರಮಿಸಬೇಕು ಎಂದು ನೆರೆದಿದ್ದ ಗ್ರಾಮಸ್ಥರಿಗೆ ಹಾಗೂ ಪೋಷಕರಿಗೆ ಸುಬ್ರಮಣಿ ಕರೆ ನೀಡಿದರು.
ವಿಜಯಲಕ್ಷ್ಮಿ ಜೂನಿಯರ್ ಕಾಲೇಜಿನ ಅಧ್ಯಕ್ಷ ಅರಮಣಮಾಡ ಬೋಸ್ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಾಕಿ ವಿಶ್ಲೇಷಣೆಗಾರ ಚೆಪ್ಪುಡಿರ ಕಾರ್ಯಪ್ಪ, ಬಾಳೆಲೆ ಪ್ಯಾಕ್ಸ್ನ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ, ಕಾರ್ಯಕ್ರಮದ ಆಯೋಜಕರಾದ ಆಳಮೇಂಗಡ ರಮೇಶ್ ಯೋಗಪಟು ಅಳಮೇಂಗಡ ಡಾನ್ ರಾಜಪ್ಪ, ಸುಳ್ಳಿಮಾಡ ದೀಪಕ್, ರಕ್ಷಿತ್, ಕಳ್ಳಿಚಂಡ ಗೌತಮ್, ಆದೇಂಗಡ ಗ್ರೀಷ್ಮ, ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಪಡಿಞರಂಡ ಪ್ರಭು ಕುಮಾರ್ ನಿರೂಪಿಸಿ, ಪೋಡಮಾಡ ದಿವ್ಯಗಿರೀಶ್ ಸ್ವಾಗತಿಸಿ, ವಂದಿಸಿದರು. ಅನುಭವಿ ತರಬೇತುದಾರರಿಂದ 20 ದಿನಗಳ ಹಾಕಿ ತರಬೇತಿ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಹಾಕಿಗೆ ನೂರು ವರ್ಷ 4ಐದನೇ ಪುಟಕ್ಕೆ
(ಮೊದಲ ಪುಟದಿಂದ) ತುಂಬಿದ ಸವಿ ನೆನಪಿನಲ್ಲಿ ಕೇಕ್ ಕತ್ತರಿಸಲಾಯಿತು. ಒಲಂಪಿಯನ್ ಭಾಸ್ಕರನ್ ಹಾಗೂ ಕಮಾಂಡರ್ ಭೀಮಯ್ಯ ಅವರಿಗೆ ಕೊಡಗಿನ ಸಾಂಪ್ರದಾಯಿಕ ಒಡಿಕತ್ತಿ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಪೋಷಕರೂ ಮುಂಜಾನೆ ಮಕ್ಕಳೊಂದಿಗೆ ಆಗಮಿಸಿ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಮುಂಜಾನೆ 7 ಗಂಟೆಯಿಂದ 10.30ಗಂಟೆಯವರೆಗೆ ನುರಿತ ತರಬೇತುದಾರರಿಂದ ಹಾಕಿ ತರಬೇತಿಯನ್ನು ನೀಡಲಾಗುತ್ತಿದೆ.