ಕೂಡಿಗೆ, ಏ. 5: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿಯ 7ನೇ ವರ್ಷದ ವಾರ್ಷಿಕ ಪೂಜೋತ್ಸವವು ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ ಶ್ರದ್ಧಾಭಕ್ತಿಯಿಂದ ನೆರವೇರಿತು.

ಪೂಜೋತ್ಸವ ಅಂಗವಾಗಿ ಕಣಿವೆಯ ಸಮೀಪದಲ್ಲಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಗಂಗಾ ಪೂಜೆ ನೆರವೇರಿಸಿ ನಂತರ ಪೂಜೋತ್ಸವಕ್ಕೆ ಆಗಮಿಸಿದ್ದ ಭಕ್ತ ಮಹಿಳೆಯರು 108 ಕಳಸವನ್ನು ಕಾವೇರಿ ನದಿಯಲ್ಲಿ ಪೂಜೆ ಸಲ್ಲಿಸಿ ಶ್ರೀ ವೀರಾಂಜನೇಯ ಸ್ವಾಮಿಯ ಪಲ್ಲಕ್ಕಿಯ ಜೊತೆಯಲ್ಲಿ ಮೆರವಣಿಗೆಯ ಮೂಲಕ ಭುವನಗಿರಿ ಗ್ರಾಮದಲ್ಲಿರುವ ದೇವಸ್ಥಾನದವರೆಗೆ ಸಾಗಿ ಬಂದರು.

ದೇವಾಲಯದ ಆವರಣದಲ್ಲಿ ಶ್ರೀ ಸ್ವಾಮಿಗೆ ಪಂಚಾಮೃತ, ರುದ್ರಾಭಿμÉೀಕ ಸೇರಿದಂತೆ ವಿವಿಧ ಹೋಮ-ಹವನ ಪೂಜಾ ಕೈಂಕರ್ಯಗಳು ನಡೆದವು. ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನಸಂರ್ತಪಣೆ ಕಾರ್ಯ ನೆರವೇರಿತು.

ಪೂಜಾ ಕೈಂಕರ್ಯಗಳನ್ನು ಅರ್ಚಕರಾದ ಶ್ರೀ ಶಿವಕುಮಾರ್, ಕೃಷ್ಣ ಮೂರ್ತಿ ಭಟ್ಟರು, ಅನಂತರಾಮು ಸೇರಿದಂತೆ ತಂಡವರು ನೆರವೇರಿಸಿದರು.

ಪೂಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲ, ಕೂಡಿಗೆ ಕೂಡುಮಂಗಳೂರು ವೀರ ಹನುಮ ಸೇನಾ ಸೇವಾ ಸಮಿತಿ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಭಾಗವಹಿಸಿದ್ದರು.