ವೀರಾಜಪೇಟೆ, ಏ. 5: ಹಚ್ಚ ಹಸಿರಿನ ಕಾನನದೊಳಗಿರುವ ಸುಮಾರು 500 ವರ್ಷಗಳ ಇತಿಹಾಸವನ್ನು ಹೊಂದಿರುವ ವೀರಾಜಪೇಟೆಯ ಬಾಳುಗೋಡು ಗ್ರಾಮದ ಕಂಡಿಮಕ್ಕಿ ದೇವಳದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರಲಾಗುತ್ತಿರುವ 101 ದೈವಗಳ ತೆರೆ ಮಹೋತ್ಸವವು ಭಕ್ತಿ ಪ್ರದಾನವಾಗಿ ನಡೆಯಿತು. ಇಲ್ಲಿ ವಿಶೇಷವಾಗಿ ನಡೆಯುವ ತೆರೆಗಳ ದರ್ಶನಕ್ಕಾಗಿ ಗ್ರಾಮಸ್ಥರಲ್ಲದೆ ದೂರದ ಊರುಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಹಬ್ಬದ ಪ್ರಯುಕ್ತ ಮಾ.26 ರಂದು ಭಂಡಾರ ಹೊರಗೆ ತರಲಾಯಿತು. 27 ರಂದು ಭಂಡಾರ ಹಾಗೂ ದೇವರು ಸ್ಥಾನ ಹತ್ತುವ ಪದ್ಧತಿ, 28 ರಂದು ಬೆಳಿಗ್ಗೆ ಬಿಸು ವೆಳ್ಳಾಟಂ, ತ್ರಿಮೂರ್ತಿ ತೆರೆ, ಮಧ್ಯಾಹ್ನದ ಬಳಿಕ ಕೋಲಾಟನಟ್ ಬೀರ ತೆರೆ, ಪೂವಕ್ಕ ತೆರೆ, ಪೊನ್ನು ಮುತ್ತಪ್ಪ ತೆರೆ, ರಾತ್ರಿ ಅಯ್ಯಪ್ಪ ತೆರೆ ನಡೆಯಿತು. 29 ರಂದು ಬೆಳಿಗ್ಗೆ 6 ಗಂಟೆಗೆ ಗುರು ತೆಗೆಯುವುದು, ಬಳಿಕ ಬೀರಾಳಿ ತೆರೆ, ಕಾಪಾಳತಿ ತೆರೆ, ಗುಳಿಗ ತೆರೆ, ಚಿಂಗಜ್ಜ ತೆರೆ, ನುಚ್ಚುಟ್ಟೆ ತೆರೆ, ಕಾಳ ಬೈರವ ತೆರೆ, ದೇವರ ದರ್ಶನ, ಹರಕೆ ಒಪ್ಪಿಸುವುದು ನಡೆಯಿತು. ಸಂಜೆ ಪೊಟ್ಟ ತೆರೆ, ಕಾರಣ ತೆರೆ, ವಿಷ್ಣು ಮೂರ್ತಿ ತೆರೆ, ಅಮ್ಮೆರಾ ಮೂರ್ತಿ ತೆರೆ ಸೇರಿದಂತೆ ರಾತ್ರಿ ಇಡೀ ತೆರೆ ನಡೆಯಿತು.

30 ರಂದು ಬೆಳಿಗ್ಗೆ 8 ಗಂಟೆಗೆ ಅಜ್ಜಪ್ಪ ತೆರೆ, ಕೊರತಿ ತೆರೆ, ದೇವರ ದರ್ಶನ, ಬಳಿಕ ಮದ್ಯಾಹ್ನದ ನಂತರ ಚಾಮುಂಡಿ ತೆರೆ ನಡೆದು ವಾರ್ಷಿಕ ತೆರೆ ಮಹೋತ್ಸವಕ್ಕೆ ಸಾಂಪ್ರಾದಾಯಿಕವಾಗಿ ಅಂತಿಮ ತೆರೆ ಎಳೆಯಲಾಯಿತು.

ತುಳುನಾಡಿನ ಪ್ರಖ್ಯಾತ ಕಾಡು ದೇವತೆಗಳಾದ ಚಾಮುಂಡಿ ಮತ್ತು ಕೊರತಿ ದೇವಿ ಸೇರಿದಂತೆ ಮೂರ್ತಿ ದೇವರುಗಳ 101 ತೆರೆಗಳನ್ನು 500 ವರ್ಷಗಳಿಂದ ತೆರೆಗಳನ್ನು ಕಟ್ಟುತ್ತಾ ಬರಲಾಗುತ್ತಿದೆ.

ತೆರೆ ಮಹೋತ್ಸವದಲ್ಲಿ ದೇವಳದಲ್ಲಿ ತೆರೆ ಕಟ್ಟಿರುವ ಸಂದರ್ಭ ತೆಂಗಿನಕಾಯಿಗೆ ಗುಂಡು ಹೊಡೆಯುವ ಸಂಪ್ರದಾಯವೂ ಇದೆ.

ಈ ದೈವಿಕ ನೆಲೆಯಿರುವ ಸ್ಥಳದಲ್ಲಿ ಶುದ್ಧವಾಗಿ ಬಂದು ಪ್ರಾರ್ಥಿಸಿದರೆ ಭಕ್ತರ ಕೋರಿಕೆಗೆ ಶೀಘ್ರದಲ್ಲಿ ಪರಿಹಾರ ದೊರಕುತ್ತದೆ ಎಂಬ ಪ್ರತೀತಿ ಕೂಡ ಇದೆ. ತೆರೆ ಮಹೋತ್ಸವ ಪ್ರಯುಕ್ತ ದೇವಾಲಯದಲ್ಲಿ ನೆರೆದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಮೂರು ದಿನಗಳ ಕಾಲ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಮೂರು ದಿನಗಳ ಕಾಲ ನಡೆದ ಹಬ್ಬದಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ಹಾಗೂ ಇದೆ ಊರಿನ ಹೊರಜಿಲ್ಲೆಗಳಲ್ಲಿ ನೆಲೆಸಿರುವ ಅಸಂಖ್ಯಾತ ಭಕ್ತರು ತೆರೆ ಪಾಲ್ಗೊಂಡು ದೇವರ ದರ್ಶನ ಪಡೆದು ಪುನೀತರಾದರು.