ನಾಪೋಕ್ಲು, ಏ. 5: ಹಾಕಿ ಉತ್ಸವದ ಸಭಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಹಾಕಿ ಉತ್ಸವದ ಆಯೋಜನೆ ಸಾಹಸಮಯ ಕೆಲಸವಾಗಿದೆ. ಇಂತಹ ಉತ್ಸವವನ್ನು ಕಳೆದ 25 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದ್ದು, ಇದಕ್ಕೆ ಸಹಕಾರ ನೀಡುತ್ತಿರುವವರನ್ನು ಸ್ಮರಿಸಬೇಕಿದೆ ಎಂದು ಹೇಳಿದರು.

ಸುಮಾರು 18 ಒಲಿಂಪಿಯನ್‍ಗಳನ್ನು ನೀಡಿರುವ ಕೊಡಗು ಜಿಲ್ಲೆಯಲ್ಲಿ ಒಂದು ಒಳ್ಳೆಯ ಕ್ರೀಡಾ ಸಂಕೀರ್ಣವಿಲ್ಲ ಎಂಬ ಕೊರಗು ಹಿಂದಿನಿಂದಲೂ ಇತ್ತು. ಇದೀಗ ವೀರಾಜಪೇಟೆಯ ವಿ.ಬಾಡಗದಲ್ಲಿ ರಾಜ್ಯಸಭಾ ಸದಸ್ಯ ಅಜಯ್ ಮಖಾನ್ ಅವರ ಅನುದಾನ, ರಾಜ್ಯ ಸರಕಾರದ ಅನುದಾನದಲ್ಲಿ ಒಟ್ಟು 40 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದೆ. ಅಲ್ಲಿ ಈಗಾಗಲೇ ಅಡ್ಮಿನ್ ಬ್ಲಾಕ್ ಕಾಮಗಾರಿ ನಡೆಯುತ್ತಿದ್ದು, ಸದ್ಯದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿ ಅಧಿಕೃತವಾಗಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು. ಅತಿಥಿಗಳಾಗಿದ್ದ ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಪಿ.ಸುಜಾ ಕುಶಾಲಪ್ಪ ಮಾತನಾಡಿ, ಸಣ್ಣ ಜಿಲ್ಲೆಯಾದರೂ ಕೊಡಗು ಹಲವಾರು ಅತ್ಯುತ್ತಮ ಹಾಕಿ ಆಟಗಾರರನ್ನು ದೇಶಕ್ಕೆ ನೀಡಿದೆ. ಇಂತಹ ಜಿಲ್ಲೆಯಲ್ಲಿ ಹಾಕಿ ಕ್ರೀಡೆಯನ್ನು ಬೆಳೆಸುವ ನಿಟ್ಟಿನಲ್ಲಿ ಕೊಡವ ಹಾಕಿ ನಮ್ಮೆ ಸಹಕಾರಿಯಾಗಿದೆ. ಬಹಳ ವರ್ಷಗಳ ಹಿಂದೆ ಕೊಡವ ಕುಟುಂಬಗಳ ಹೆಸರುಗಳೇ ಸರಿಯಾಗಿ ಪರಿಚಯವಿಲ್ಲದ ಪರಿಸ್ಥಿತಿಯಿತ್ತು. ಕಳೆದ 25 ವರ್ಷಗಳಿಂದ ನಡೆಯುತ್ತಿರುವ ಹಾಕಿ ಉತ್ಸವದಿಂದ ಕೊಡವ ಕುಟುಂಬಗಳ ನಡುವೆ ಸಂಬಂಧ ಬೆಸೆಯಲು ಸಾಧ್ಯವಾಗಿದೆ. ಹಾಕಿ ಉತ್ಸವವನ್ನು ಆರಂಭಿಸಿದ ಪಾಂಡಂಡ ಕುಟ್ಟಪ್ಪ ಅವರ ದೂರದೃಷ್ಟಿಯನ್ನು ಸ್ಮರಿಸಬೇಕು ಎಂದರು.

ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ, ಕ್ರೀಡಾ ಜಿಲ್ಲೆ ಎಂದು ಹೆಸರುವಾಸಿಯಾದ ಕೊಡಗಿನ ಪಟುಗಳು ಬೆಂಗಳೂರು ಸೇರಿದಂತೆ ನಾನಾ ನಗರದಲ್ಲಿ ತರಬೇತಿ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಆದರೆ ಕೊಡಗಿನಲ್ಲಿ ಉತ್ತಮ ಕ್ರೀಡಾಂಗಣವಿಲ್ಲ. ಕೇಂದ್ರ ಸರಕಾರದ ಖೇಲೋ ಇಂಡಿಯಾ ಯೋಜನೆಯಲ್ಲಿ ಕೋಟ್ಯಂತರ ರೂ. ಅನುದಾನವಿದ್ದರೂ ಜಿಲ್ಲೆಗೆ ಯಾವುದೇ ಕೊಡುಗೆ ಸಿಕ್ಕಿಲ್ಲ.ಇಂತಹ ಅನುದಾನವನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಕ್ರೀಡಾ ಮೂಲ ಸೌಕರ್ಯಗಳ ಅಭಿವೃದ್ದಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಇದೀಗ ರಾಜ್ಯ ಸರಕಾರ ಸಹಕಾರ ನೀಡುತ್ತಿದ್ದು, ಪೆÇನ್ನಣ್ಣ ಅವರ ಶ್ರಮದಿಂದ ವಿ.ಬಾಡಗದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು. 4ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಮಾತನಾಡಿ, ಇದುವರೆಗೆ ಹಾಕಿ ಉತ್ಸವವನ್ನು ನಡೆಸಿದ ಕುಟುಂಬಗಳ ಶ್ರಮದಿಂದ 26 ನೇ ವರ್ಷದ ಉತ್ಸವ ನಡೆಯುತ್ತಿದೆ. ಮಕ್ಕಳು ಹಾಕಿ ಪಟುಗಳಾಗಿ ಬೆಳೆಯಲು, ಅಂಪೈರ್‍ಗಳಾಗಿ, ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡಲು ಹಾಕಿ ಉತ್ಸವದಿಂದ ಸಾಧ್ಯವಾಗುತ್ತಿದೆ ಎಂದು ಹೇಳಿದರು.

ಚೇನಂಡ ಹಾಕಿ ನಮ್ಮೆ ಅಧ್ಯಕ್ಷ ಕಂಬಣಿ ಕರುಂಬಯ್ಯ ಮಾತನಾಡಿ, ಕೊಡವ ಕುಟುಂಬಗಳ ಹಾಕಿ ಉತ್ಸವ ಗಿನ್ನಿಸ್ ವಿಶ್ವದಾಖಲೆ, ವಲ್ರ್ಡ್ ಬುಕ್ ಆಫ್ ರೆಕಾರ್ಡ್, ಲಿಮ್ಕಾ ದಾಖಲೆಗಳನ್ನು ಬರೆದಿದೆ. ಕಳೆದ ವರ್ಷ 25ನೇ ಬೆಳ್ಳಿ ಹಬ್ಬವನ್ನು ಮುದ್ದಂಡ ಕಪ್ ಮೂಲಕ ಆಚರಿಸಲಾಗಿದೆ. ಇದು ಹೆಮ್ಮೆಯ ವಿಷಯ ಎಂದು ಹೇಳಿದರು.

ವೇದಿಕೆಯಲ್ಲಿ ಕೊಡವ ಹಾಕಿ ಅಕಾಡೆಮಿ ಕಾರ್ಯಾಧ್ಯಕ್ಷ ಒಲಿಂಪಿಯನ್ ಚೆಪ್ಪುಡಿರ ಪೂಣಚ್ಚ, ಹಾಕಿ ಕೂರ್ಗ್ ಅಧ್ಯಕ್ಷ ಪಳಂಗಂಡ ಲವಕುಮಾರ್, ಚೇನಂಡ ಹಾಕಿ ಉತ್ಸವದ ಪ್ರಮುಖರಾದ ಕಾರ್ಯಾಧ್ಯಕ್ಷ ದೀನಾ ಚಂಗಪ್ಪ, ಪಟ್ಟೆದಾರರಾದ ಚೇನಂಡ ಪೊನ್ನಪ್ಪ, ಸುರೇಶ್ ನಾಣಯ್ಯ, ಚೇನಂಡ ಮಾದಯ್ಯ, ಪಂದ್ಯಾವಳಿ ನಿರ್ದೇಶಕ ನಾಯಕಂಡ ದೀಪು ಚಂಗಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ನಡುವೆ ಚೇನಂಡ ಹಾಕಿ ಉತ್ಸವದ ಅಂಗವಾಗಿ ಹೊರತರಲಾಗಿರುವ ಪುತ್ತಾಮನೆ ವಿದ್ಯಾ ಜಗದೀಶ್ ಅವರ ಹಾಡನ್ನು ಬಿಡುಗಡೆ ಮಾಡಲಾಯಿತು. ಕಳೆದ ವರ್ಷದ ವಿಜೇತರಾದ ಮಂಡೇಪಂಡ ಕುಟುಂಬದವರು ಬೆಳ್ಳಿಯ ರೋಲಿಂಗ್ ಟ್ರೋಫಿಯನ್ನು ಹಸ್ತಾಂತರ ಮಾಡಿದರು. ಮೆರವಣಿಗೆಯಲ್ಲಿ ಕಲ್ಲಡ್ಕದ ಗೊಂಬೆಯಾಟ ತಂಡದವರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಮುನ್ನ ಮೈದಾನದ ಆವರಣದಲ್ಲಿ ನಿರ್ಮಿಸಲಾಗಿರುವ ಹಾಕಿ ಉತ್ಸವದ ಜನಕ ಪಾಂಡಂಡ ಕುಟ್ಟಪ್ಪ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಚೇನಂಡ ಮನಸ್ವಿ ಪ್ರಾರ್ಥಿಸಿ, ಕಂಬಣಿ ಕರುಂಬಯ್ಯ ಸ್ವಾಗತಿಸಿದರು. ಮಾಳೇಟಿರ ಶ್ರೀನಿವಾಸ್, ಚೋಕಿರ ಅನಿತಾ ದೇವಯ್ಯ, ಅಜ್ಜೇಟಿರ ವಿಕ್ರಂ ಉತ್ತಪ್ಪ, ಚೇನಂಡ ಸಂಪತ್ ನಿರೂಪಣೆ, ವೀಕ್ಷಕ ವಿವರಣೆ ನೀಡಿದರು.