ನಾಪೋಕ್ಲು, ಏ. 5: ಕಳೆದ ನಾಲ್ಕು ದಿನಗಳ ಹಿಂದೆ ತಡಿಯಂಡಮೋಳ್ ಬೆಟ್ಟದ ತಪ್ಪಲಿನಲ್ಲಿ ನಾಪತ್ತೆಯಾಗಿದ್ದ ಮಹಿಳೆ ಇದೀಗ ಪತ್ತೆಯಾಗಿದ್ದಾರೆ.
ಬೆಟ್ಟದ ತಪ್ಪಲಿನಲ್ಲಿ ದಾರಿ ತಪ್ಪಿದ್ದ ಕೇರಳದ ಕೋಯಿಕೋಡ್‍ನ ನಾದಪುರದ ಕೆ. ಗೋಪಿ ಹಾಗೂ ಶೈಲಜಾ ದಂಪತಿಯ ಪುತ್ರಿ ಶರಣ್ಯ (36) ಅವರನ್ನು ಇಂದು ಹುಡುಕಾಡುತ್ತಿದ್ದ ಸ್ಥಳೀಯರ ಕಾರ್ಯಾಚರಣೆ ತಂಡಕ್ಕೆ ಪತ್ತೆಯಾಗಿದ್ದು, ಅವರನ್ನು ಸುರಕ್ಷಿತವಾಗಿ ಬೆಟ್ಟದಿಂದ ಕೆಳಗಿಳಿಸಿ ವೀರಾಜಪೇಟೆಯ ಆಸ್ಪತ್ರೆಗೆ ರವಾನಿಸಲಾಗಿದೆ. ಬೆಟ್ಟದ ಅರಣ್ಯ ಇಲಾಖೆಯ ಚೆಕ್‍ಪೋಸ್ಟ್ ಸೀಬೆತಟ್ಟು ಎಂಬಲ್ಲಿಂದ ಸುಮಾರು 4 ಕಿ.ಮೀ. ದೂರದ ಪಾಂಡಂಡಮಲೆ ಎಂಬಲ್ಲಿ ಶರಣ್ಯ ಪತ್ತೆಯಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ. ಶರಣ್ಯ ತಡಿಯಂಡಮೋಳ್ ಬೆಟ್ಟಕ್ಕೆ ತೆರಳಲು ಆನ್‍ಲೈನ್‍ನಲ್ಲಿ ಬುಕ್ಕಿಂಗ್ ಮಾಡಿಕೊಂಡು ಯವಕಪಾಡಿ ಗ್ರಾಮದ ಹೋಂಸ್ಟೇಯೊಂದಕ್ಕೆ ಬಂದಿದ್ದರು. ತಾ. 2 ರಂದು ಇತರೆ ಪ್ರವಾಸಿಗರೊಂದಿಗೆ ಚಾರಣಕ್ಕೆ ಈಕೆ ತೆರಳಿದ್ದು, ಜೊತೆಗೆ ತೆರಳಿದ್ದವರು ಸಂಜೆ ವೇಳೆಯಲ್ಲಿ ಆಗಮಿಸಿದ್ದರೂ ಶರಣ್ಯ ಮಾತ್ರ ವಾಪಾಸ್ ಬಂದಿರಲಿಲ್ಲ. ಬಳಿಕ ಪೊಲೀಸರ ಸಹಾಯದಿಂದ ಸ್ಥಳೀಯರಾದ ಕುಡಿಯರ ಮುತ್ತಪ್ಪ ನೇತೃತ್ವದ ತಂಡ ಬೆಟ್ಟದಲ್ಲಿ ಹುಡುಕಾಟ ನಡೆಸಿತ್ತು. ಆದರೂ ಸುಳಿವು ಲಭ್ಯವಾಗದ ಹಿನ್ನೆಲೆ ತಾ. 4 ರಂದು ನಕ್ಸಲ್ ನಿಗ್ರಹ ಪಡೆಯನ್ನು ಬಳಸಿಕೊಂಡು ಹುಡುಕಾಟ ಮುಂದುವರೆಸಲಾಯಿತು. ಕಾರ್ಯಾ ಚರಣೆಯ ಸಹಾಯಕ್ಕಾಗಿ ಡ್ರೋನ್ ಕೂಡ ಬಳಸಲಾಯಿತು. ಶರಣ್ಯಳ ಮೊಬೈಲ್ ನೆಟ್‍ವರ್ಕ್ ಇರಿಟ್ಟಿ ವ್ಯಾಪ್ತಿಯಲ್ಲಿ ಎಂದು ತೋರಿಸುತ್ತಿತ್ತು. ಈ ನಡುವೆ ಪನ್ನಂಗಾಲತಮ್ಮೆ ದೇವರ ಉತ್ಸವಕ್ಕೆ ಕಟ್ಟುಬಿದ್ದ ಹಿನ್ನೆಲೆ ಗ್ರಾಮಸ್ಥರು ದೇವರಿಗೆ ಪ್ರಾರ್ಥನೆ ನೆರವೇರಿಸಿ ಹುಡುಕಾಟವನ್ನು ಮುಂದುವರೆಸಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರಕಾರ ಮಹಿಳೆಯ ಪತ್ತೆಗೆ ವಿಶೇಷ ತಂಡವನ್ನು ನಿಯೋಜಿಸಲು ಮುಂದಾಗಿತ್ತು. ಇಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದರು. ಗುರುವಾರ ಕೊನೆಯದಾಗಿ ದೂರವಾಣಿ ಮೂಲಕ ಹೋಂಸ್ಟೇ ಸಂಪರ್ಕಿಸಿರುವ ಯುವತಿ, ತಾನು ದಾರಿತಪ್ಪಿದ್ದಾಗಿ ತಿಳಿಸಿದ್ದಾರೆ ಎಂಬ ಮಾಹಿತಿ ಇದೆ. ಅವರ ಫೋನ್ ಲೊಕೇಷನ್ ಆಧರಿಸಿ ಶೋಧ ನಡೆಸಲಾಗುತ್ತಿದೆ. ಸ್ಥಳೀಯ ಜನರೂ ನೆರವಿಗೆ ಧಾವಿಸಿದ್ದು, ಅತ್ಯಾಧುನಿಕ ಥರ್ಮಲ್ ಡ್ರೋನ್ ಕ್ಯಾಮರಾಗಳ ನೆರವೂ ಪಡೆಯಲಾಗಿದೆ. ಇಂದಿನಿಂದ ಹೆಚ್ಚುವರಿ ತಂಡ ನಿಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕಳವಳ ವ್ಯಕ್ತಪಡಿಸಿ ಕ್ರಮಕ್ಕೆ ಸೂಚಿಸಿದ್ದರು ಎಂದು ಖಂಡ್ರೆ ತಿಳಿಸಿದ್ದರು.
ಸ್ಥಳೀಯರ ಕಣ್ಣಿಗೆ ಬಿದ್ದ ಮಹಿಳೆ
ಕಾರ್ಯಾಚರಣೆ ತೀವ್ರಗೊಂಡು ಹಲವಾರು ತಂಡವಾಗಿ ಮಹಿಳೆಯ ಹುಡುಕಾಟ ಮುಂದುವರೆದಿತ್ತು. ಕಡಿದಾದ ಅರಣ್ಯ ಪ್ರದೇಶ, ದುರ್ಗಮ ಹಾದಿಯಲ್ಲಿ ಸಂಚರಿಸಿ ಅನುಭವ ಹೊಂದಿರುವ ಸ್ಥಳೀಯ ಕುಡಿಯರು ಹಾಗೂ ಅಡಿಯ ಜನಾಂಗದವರು ಕೂಡ ಕಾರ್ಯಾಚರಣೆಗೆ ಸಾಥ್ ನೀಡಿದ್ದರು. ಅರಣ್ಯ ಇಲಾಖೆ, ಎಎನ್‍ಎಫ್ ಜೊತೆಗೂಡಿದ ಸ್ಥಳೀಯರು ಯುವತಿಯನ್ನು ಪತ್ತೆಹಚ್ಚಲು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಹುಡುಕಾಟದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು. ಭಾನುವಾರ ಕೂಡ ಹುಡುಕಾಟ ಮುಂದುವರೆಸಿದ್ದ ಕಾರ್ಯಾಚರಣೆ ತಂಡಗಳ ಪೈಕಿ ಅಡಿಯರ ಸುಬ್ರಮಣಿ, ಅಯ್ಯಪ್ಪ, ರಾಜು, ಮಣಿಕಂಠ, ಮಣಿ ಅವರುಗಳಿದ್ದ ತಂಡಕ್ಕೆ ಶರಣ್ಯ ಬೆಟ್ಟದ ತಪ್ಪಲಿನ ಕೊಂಚ ದೂರದಲ್ಲಿ ಕಂಡು ಬಂದಿದ್ದಾರೆ. ತಕ್ಷಣ ಅವರೊಂದಿಗೆ ಮಾತನಾಡಿ, ಕೆಳಗಿಳಿಸಿ ಮಾರ್ಗಮಧ್ಯೆ ನೆಟ್‍ವರ್ಕ್ ಸಿಗುವ ಸ್ಥಳದಲ್ಲಿ ಕೆಳಗಿದ್ದವರಿಗೆ ಕರೆ ಮಾಡಿ ಶರಣ್ಯ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಬೆಟ್ಟದಲ್ಲಿ ಹುಡುಕಾಟ ನಡೆಸುತ್ತಿದ್ದವರೂ ಕೆಳಗಿಳಿದು ಬಂದಿದ್ದಾರೆ. ಕಾರ್ಯಾಚರಣೆ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಎಸಿಎಫ್ ಸೆಂಥಿಲ್ ಕುಮಾರ್, ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು. - ದುಗ್ಗಳ ಸದಾನಂದ