ನಾಪೋಕ್ಲು, ಏ. 5: ಚೇನಂಡ ಕೌಟುಂಬಿಕ ಹಾಕಿ ಕಪ್‍ನ ಮೊದಲ ದಿನ 7 ಪಂದ್ಯಾವಳಿ ನಡೆಯಿತು.
ಮೊದಲ ಪಂದ್ಯ ಓಡಿಯಂಡ-ಚೋಳಪಂಡ ನಡುವೆ ನಡೆಯಿತು. 7-0 ಗೋಲುಗಳ ಅಂತರದಿಂದ ಓಡಿಯಂಡ ಗೆಲುವು ಸಾಧಿಸಿತು. ಓಡಿಯಂಡ ಪರ ರವಿ ಕಾವೇರಪ್ಪ 4 ಗೋಲುಗಳನ್ನು ದಾಖಲಿಸಿ ಮಿಂಚಿದರು. ಬೋಪಣ್ಣ, ಕೀರ್ತನ್ ಕಾರ್ಯಪ್ಪ, ಗಗನ್ ಪೂಣಚ್ಚ ತಲಾ ಒಂದು ಗಳಿಸಿ ತಂಡಕ್ಕೆ ನೆರವಾದರು.
ಚೆರಿಯಂಡ 5-0 ಗೋಲುಗಳಿಂದ ಪಾಸುರ ವಿರುದ್ಧ ಜಯ ಸಾಧಿಸಿತು. ಚೆರಿಯಂಡ ಪರ ಭರತ್ ಬಿದ್ದಪ್ಪ, ಅನೂಪ್ ತಿಮ್ಮಯ್ಯ, ಗಾಯಕ್ ಗಣಪತಿ, ದೀಪಕ್ ದೇವಯ್ಯ ತಲಾ ಒಂದು ಗೋಲು ಗಳಿಸಿದರು.
ಪೂದ್ರಿಮಾಡ ವಿರುದ್ಧ ಮಳವಂಡ 3-0 ಗೋಲುಗಳ ಗೆಲುವು ಪಡೆಯಿತು. ತಕ್ಷಕ್ ಬಿದ್ದಪ್ಪ 2 ಗೋಲು ಗಳಿಸಿದರೆ, ಚಿಟ್ಟಿಯ್ಯಪ್ಪ 1 ಗೋಲು ಬಾರಿಸಿದರು. ಬೊಳಿಯಾಡಿರ ಉದ್ದಪಂಡ ವಿರುದ್ಧ 4-0 ಗೋಲುಗಳ ಗೆಲುವು ಪಡೆಯಿತು. ಬೊಳಿಯಾಡಿರ ಶಶಾಂಕ್ ಸುಬ್ಬಯ್ಯ, ಸಚಿನ್ ಗಣಪತಿ ತಲಾ 2 ಗೋಲು ಬಾರಿಸಿದರು.
ಕಾಂಗೀರ ಹಾಗೂ ಅಜ್ಜಿಕುಟ್ಟಿರ ನಡುವಿನ ಪಂದ್ಯದಲ್ಲಿ ಕಾಂಗೀರ ಪರ ಬಿಷನ್ ಬಿದ್ದಪ್ಪ ಹಾಗೂ ಅಜ್ಜಿಕುಟ್ಟಿರ ಪರ ಅನೂಪ್ ತಲಾ ಒಂದು ಗೋಲು ಗಳಿಸಿದರು. ನಿಗದಿತ ಸಮಯದಲ್ಲಿ ಸಮಬಲ ಸಾಧಿಸಿದ ಹಿನ್ನೆಲೆ ಟೈಬ್ರೇಕರ್ ಮೊರೆ ಹೋಗಲಾಯಿತು. ಈ ವೇಳೆ 3-2 ಗೋಲುಗಳಿಂದ ಕಾಂಗೀರ ಗೆಲುವಿನ ನಗೆ ಬೀರಿತು.
ಕಾಳೇಂಗಡ ಪಟ್ಟಮಾಡ ವಿರುದ್ಧ 3-0 ಗೋಲುಗಳ ಗೆಲುವು ತನ್ನದಾಗಿಸಿಕೊಂಡಿತು. ಕಾಳೇಂಗಡ ಪರ ಪವನ್, ಸುಶಾನ್, ಮೋನಿಶ ತಲಾ ಒಂದು ಗೋಲು ಬಾರಿಸಿದರು. ಅಪ್ಪಚೆಟ್ಟೋಳಂಡ ವಿರುದ್ಧ ಗುಮ್ಮಟಿರ ಪರಭಾವಗೊಂಡಿತು. ಅಪ್ಪಚೆಟ್ಟೋಳಂಡ ಪರ ಹರ್ಷಿತ್ ಬಾರಿಸಿದ ಏಕೈಕ ಗೋಲಿನ ಸಹಾಯದಿಂದ ತಂಡ ಗೆಲುವು ಪಡೆಯಿತು.