ಸುಂಟಿಕೊಪ್ಪ, ಏ. 5: ಯಾವುದೇ ಶಾಲಾ ಕಾಲೇಜುಗಳಲ್ಲಿ ವಿದ್ಯೆ ಕಲಿಸಿದ ಗುರುಗಳನ್ನು ಎದುರಿಗೆ ಕಂಡಾಗ ನಮಸ್ಕರಿಸಿ ಗೌರವಿಸಲು ಆಗದಿದ್ದರೂ ಕನಿಷ್ಟ ಕಿರುನಗೆಯನ್ನಾದರೂ ಮಾಡುವಂತೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಆರ್ ಸುನಿಲ್‍ಕುಮಾರ್ ಹೇಳಿದರು.

ಗದ್ದೆಹಳ್ಳ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಮಕ್ಕಳು ತಾವು ಕಲಿತ ಶಾಲೆಯನ್ನು ಮರೆಯಬಾರದು, ಶಿಕ್ಷಣ ನೀಡಿದ ಶಿಕ್ಷಕರನ್ನು ಎಂದಿಗೂ ಕಡೆಗಣಿಸಬಾರದೆಂದರು.

ಶಾಲೆಯ ಮುಖ್ಯೋಪಾ ಧ್ಯಾಯಿನಿ ಹೆಚ್.ಸಿ ಹೇಮಕುಮಾರಿ ಅವರು ಮಾತನಾಡಿ, ಕಠಿಣ ಪರಿಶ್ರಮದಿಂದ ಮಾತ್ರ ಶಿಕ್ಷಣದಲ್ಲಿ ಉತ್ತಮ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಅನಿತಾ ಅವರು ವಹಿಸಿದ್ದರು. ಇದೇ ಸಂದರ್ಭ ತಮಗೆ ಶಿಕ್ಷಣ ನೀಡಿದ ಶಿಕ್ಷಕರುಗಳಿಗೆ ನೆನಪಿನ ಕಾಣಿಕೆಗಳನ್ನು ನೀಡಿ ವಿದ್ಯಾರ್ಥಿಗಳು ಗೌರವಿಸಿದರು.

ಸಮಾರಂಭದಲ್ಲಿ ವೇದಿಕೆಯಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ಕೆ.ಇ ಕರೀಂ, ಮಾಜಿ ಉಪಾಧ್ಯಕ್ಷೆ ನಳಿನಿ ಲೋಕೇಶ್, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರವಿ, ಎಸ್‍ಡಿಎಂಸಿ ಮಾಜಿ ಅಧ್ಯಕ್ಷೆ ಬಲ್ಕಿಸ್, ಸಹ ಶಿಕ್ಷಕರುಗಳಾದ ಮಂಜುನಾಥ್, ಮೀನಾಕುಮಾರಿ, ಅನಿತಾ, ಯಶೋಧ ಎಸ್‍ಡಿಎಂಸಿ ಸದಸ್ಯರು ಇದ್ದರು.