ಪೊನ್ನಂಪೇಟೆ, ಏ. 4: ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಿನ್ನೆ ಇಡೀ ದಿನ ಮಹಿಳೆಯರ ಸಂಭ್ರಮ ಮನೆ ಮಾಡಿತ್ತು. ವಸ್ತು ಪ್ರದರ್ಶನ - ಮಾರಾಟ ಮೇಳ, ಆಹಾರ ಮೇಳ ಸಹಿತವಾಗಿ ಸಾಂಸ್ಕøತಿಕ ಕಲರವ, ಕೊಡವ ಸಾಂಸ್ಕøತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಮಾದರಿಯ ಈ ಹಿಂದಿನ ಚಿತ್ರಣಗಳನ್ನು ಒಳಗೊಂಡ ವಿಶೇಷ ರ್ಯಾಂಪ್ವಾಕ್... ವಾಲಗತಾಟ್ನಂತಹ ಕಾರ್ಯಕ್ರಮಗಳು ಹೆಂಗಳೆಯರ ಸಂಭ್ರಮ ಹೆಚ್ಚಿಸಿತ್ತು. ಅಧಿಕ ಸಂಖ್ಯೆಯಲ್ಲಿ ನೆರೆದಿದ್ದ ಮಹಿಳೆಯರು, ಸಂಸಾರದೊಂದಿಗೆ ಭಾಗವಹಿಸಿದ್ದ ಪುರುಷರು, ಮಕ್ಕಳು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗಗಳಾಗಿದ್ದರು. ದಕ್ಷಿಣ ಕೊಡಗಿನ ಕಾರ್ಯವ್ಯಾಪ್ತಿಯನ್ನು 4ಐದನೇ ಪುಟಕ್ಕೆ
(ಮೊದಲ ಪುಟದಿಂದ) ಹೊಂದಿರುವ ಕಾವೇರಿ ಪೊಮ್ಮಕ್ಕಡ ಕೂಟದ ವತಿಯಿಂದ ಆಯೋಜಿತವಾಗಿದ್ದ ನಾಲ್ಕನೇ ವರ್ಷದ ಮೀನ್ಯಾರ್ ನಮ್ಮೆ ಕಾರ್ಯಕ್ರಮದ ಸಂಭ್ರಮ ಇದಾಗಿತ್ತು. ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೊಟ್ಟಂಗಡ ವಿಜು ದೇವಯ್ಯ ಮುಂದಾಳತ್ವದಲ್ಲಿ ಬೆಳಿಗ್ಗೆ ವಸ್ತು ಪ್ರದರ್ಶನ - ಮಾರಾಟ ಮೇಳವನ್ನು ಅಜ್ಜಿಕುಟ್ಟಿರ ಕಾಂಚನ್ ಪೊನ್ನಣ್ಣ ಅವರು ಉದ್ಘಾಟಿಸಿದರು. ಕಾಳಮಂಡ ಜಗತ್ ಆಪಟ್ಟಿರ ಟಾಟು ಮೊಣ್ಣಪ್ಪ ಮತ್ತಿತರರು ಜತೆಗಿದ್ದರು.
ಸಭಾ ಕಾರ್ಯಕ್ರಮ : ಪೊನ್ನಣ್ಣ ಹರ್ಷ
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಕಾವೇರಿ ಪೊಮ್ಮಕ್ಕಡ ಕೂಟ ಕಳೆದ ಹಲವು ವರ್ಷಗಳಿಂದ ಅನೇಕ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಮಹಿಳಾ ಸಬಲೀಕರಣಕ್ಕೆ ಇದೊಂದು ವೇದಿಕೆಯಾಗಿದೆ. ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ದೊಡ್ಡದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಚೀಫ್ ಎಲೆಕ್ಟ್ರಿಕಲ್ ಆಫೀಸರ್ ತಿತೀರ ರೋಷನ್ ಅಪ್ಪಚ್ಚು ಅವರು ಮಾತನಾಡಿ, ಕೊಡವ ಸಮುದಾಯ ಚಿಕ್ಕ ಸಮುದಾಯವಾಗಿದ್ದು, ರಾಜ್ಯ ಹಾಗೂ ಕೇಂದ್ರ ಸರಕಾರಗಳ ಸೌಲಭ್ಯಗಳನ್ನು ಬಳಸಿಕೊಳ್ಳುವ ಮೂಲಕ ಅಭಿವೃದ್ಧಿ ಸಾಧಿಸಬೇಕೆಂದು ಕರೆ ನೀಡಿದರು. ಈ ಹಿಂದೆ ಸೈನ್ಯದಲ್ಲಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಕೊಡವರ ಸಂಖ್ಯೆ ಹೆಚ್ಚಿತ್ತು. ಆದರೆ ಈಗ ಹೊರಜಿಲ್ಲೆಯವರ ಸಂಖ್ಯೆ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ಕೊಡವ ಸಮುದಾಯದ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಾಗಿ ಭಾಗವಹಿಸುವ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಕರೆ ನೀಡಿದರು. ಕೊಡಗಿನಲ್ಲಿ ಚೆಸ್ಕಾಂ ಇಲಾಖೆ ಸಾಕಷ್ಟು ಅಭಿವೃದ್ಧಿ ಕಾಣುತ್ತಿದೆ. ಇಂಧನ ಸಚಿವಾದ ಕೆ.ಜೆ. ಜಾರ್ಜ್ ಹಾಗೂ ಶಾಸಕರಾದ ಎ.ಎಸ್. ಪೊನ್ನಣ್ಣ ಅವರ ಸಹಕಾರದಿಂದ ಚೆಸ್ಕಾಂ ಇಲಾಖೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ರಾಜ್ಯ ಸರಕಾರ ಚೆಸ್ಕಾಂಗೆ 200 ಕೋಟಿ ರೂಪಾಯಿಗಳ ಅನುದಾನ ಒದಗಿಸಿದ್ದು, 2030ರವರೆಗೆ ದೂರದೃಷ್ಟಿ ಯೋಜನೆಯನ್ನು ರೂಪಿಸಿದ್ದು, ಪೊನ್ನಂಪೇಟೆಯಲ್ಲಿ ಈ ಹಿಂದೆ ಕೇವಲ ಒಂದು ವಿದ್ಯುತ್ ವಿತರಣಾ ಘಟಕವಿದ್ದು, ಇದೀಗ ನಾಲ್ಕು ವಿದ್ಯುತ್ ವಿತರಣಾ ಘಟಕವನ್ನು ಸ್ಥಾಪಿಸಲಾಗಿದೆ ಎಂದರು
ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ಕಾಳಿಮಾಡ ಮೋಟಯ್ಯ ಅವರು ಮಾತನಾಡಿ, ಕಾವೇರಿ ಪೊಮ್ಮಕ್ಕಡ ಕೂಟವು ಹಲವು ಎಡರುತೊಡರುಗಳ ನಡುವೆ ಕಳೆದ ನಾಲ್ಕು ವರ್ಷಗಳಿಂದ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಇಂದಿನ ಮಿನ್ಯಾರ್ ನಮ್ಮೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈಗಿನ ಕೊಡವ ಹೆಣ್ಣುಮಕ್ಕಳು ಸಮಾಜಕ್ಕೊಂದು ಶಕ್ತಿಯಾಗಿದ್ದು, ಸಮಾಜದಿಂದ ಅವರು ಬೆಳೆದಿದ್ದಾರೆ. ಸಮಾಜವನ್ನು ಬೆಳೆಸುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇಂದು ದೇಶದ ಆಳ್ವಿಕೆವರೆಗೆ ಹೆಣ್ಣುಮಕ್ಕಳು ತಲುಪಿದ್ದಾರೆ. ಕೊಡವ ಸಂಸ್ಕøತಿ, ಆಚಾರ, ವಿಚಾರ, ಪದ್ದತಿ, ಪರಂಪರೆ, ನಮ್ಮ ನಾಡು, ಮಂದ್ಮಾನಿ ಬೆಳೆಸಿಕೊಂಡು ಬರುವಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ. ಇದನ್ನು ನಮ್ಮ ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕಾರ್ಯವಾಗಬೇಕು ಆಗ ಮಾತ್ರ ಕೊಡವ ಸಂಸ್ಕøತಿ ಉಳಿಯಲು ಸಾಧ್ಯವೆಂದು ಇಂಗಿತ ವ್ಯಕ್ತಪಡಿಸಿದ ಅವರು, ಕೊಡವ ಸಾಹಿತ್ಯ ಅಕಾಡೆಮಿ ನಡೆಸಿಕೊಂಡು ಬರುತ್ತಿರುವ ‘ಪುಸ್ತಕ ಪತ್ತಾಯ’ ಉತ್ತಮ ಯೋಜನೆಯಾಗಿದ್ದು, ಕಳೆದ ಎರಡು ವರ್ಷಗಳ ಹಿಂದೆಯೇ ಪೊನ್ನಂಪೇಟೆ ಕೊಡವ ಸಮಾಜ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು ಎಂದರು.
ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾದ ಚೆರಿಯಪಂಡ ಸುರೇಶ್ ನಂಜಪ್ಪ ಮಾತನಾಡಿ, ಮಿನ್ಯಾರ್ ನಮ್ಮೆ ಆಚರಣೆಯಲ್ಲಿ ಕಾವೇರಿ ಪೊಮ್ಮಕ್ಕಡ ಕೂಟವು ಕಳೆದ ಆರು ತಿಂಗಳುಗಳ ಸತತ ಪರಿಶ್ರಮವಿದೆ ಎಂದರಲ್ಲದೇ, ಮುಂದಿನ ದಿನಗಳಲ್ಲಿ ಮತ್ತಷ್ಟು ವೈವಿಧ್ಯಮಯ ಕಾರ್ಯಕ್ರಮಗಳನ್ನು ಕಾವೇರಿ ಪೊಮ್ಮಕ್ಕಡ ಕೂಟದಿಂದ ಆಯೋಜಿಸುವಂತಾಗಲಿ ಎಂದು ಸಲಹೆ ನೀಡಿದರು. ಬೆಂಗಳೂರು ಕೊಡವ ಸಮಾಜದಿಂದ ತಂದ್ ಬೆಂದ್ ಕಾರ್ಯಕ್ರಮ ಆಯೋಜಿಸಿದ್ದು, ಮೈಸೂರು, ಬೆಂಗಳೂರು ಕೊಡವ ಸಮಾಜ ಸೇರಿದಂತೆ ಎಲ್ಲಾ ಕೊಡವ ಸಮಾಜಗಳಲ್ಲೂ ಈ ಕಾರ್ಯಕ್ರಮ ಕಾರ್ಯಗತಗೊಳಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೊಟ್ಟಂಗಡ ವಿಜು ದೇವಯ್ಯ ಅವರು ಮಾತನಾಡಿ, ನಾಲ್ಕನೇ ವರ್ಷದ ಮಿನ್ಯಾರ್ ನಮ್ಮೆ ಆಯೋಜಿಸಲಾಗಿದ್ದು, ಕೊಡಗಿನ ಕೊಡವರಿಗೆ ಬೆಂಗಳೂರು ಕೊಡವ ಸಮಾಜ ಓಂದು ದೊಡ್ಡ ಆಸ್ತಿಯಾಗಿದೆ. ಎಂದರಲ್ಲದೇ, ಮಿನ್ಯಾರ್ ನಮ್ಮೆ ಯಶಸ್ಸಿಗೆ ಶಾಸಕರು ಸೇರಿದಂತೆ ದಾನಿಗಳು ಅಗತ್ಯ ಸಹಕಾರವನ್ನು ನೀಡಿದ್ದಾರೆ. ಕಾವೇರಿ ಪೊಮ್ಮಕ್ಕಡ ಕೂಟದ ಸದಸ್ಯರ ಸಂಖ್ಯೆ ಹೆಚ್ಚಿಸಲು ಗುರಿ ಹೊಂದಲಾಗಿದೆ. ನಮ್ಮ ಎಲ್ಲಾ ಕಾರ್ಯಕ್ರಮಗಳಲ್ಲಿ ಕೊಡವ ಮಹಿಳೆಯರು ಸಮಾಜದಲ್ಲಿ ಹೇಗಿರಬೇಕು. ನಮ್ಮ ಸಂಸ್ಕøತಿ, ಆಚಾರ, ವಿಚಾರ ಮುಂದಿನ ಪೀಳಿಗೆಗೆ ಮುಂದುವರೆಸಿಕೊಂಡು ಹೋಗುವಂತೆ ಕಿವಿಮಾತು ಹೇಳಿದರು.
ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಚೆಪ್ಪುಡಿರ ಅರುಣ್ ಮಾಚಯ್ಯ ಅವರು ಕಾರ್ಯಕ್ರಮಕ್ಕೆ ಆಗಮಿಸಿ, ಶುಭಕೋರಿದರು. ಅತಿಥಿಗಳನ್ನು ದುಡಿಕೊಟ್ಟ್ ಪಾಟ್ನೊಂದಿಗೆ ಸ್ವಾಗತಿಸಲಾಗಿತು.
ಕಾರ್ಯಕ್ರಮದಲ್ಲಿ ಸಾಹಿತಿ ಬಿದ್ದಂಡ ನಾಣಿ ನಾಣಯ್ಯ, ಹಾಡುಗಾರರಾದ ಕಬ್ಬಚ್ಚೀರ ರಶ್ಮಿ ಕಾರ್ಯಪ್ಪ, ಮಾಳೇಟಿರ ಅಜಿತ್ ಪೂವಣ್ಣ ಸೇರಿದಂತೆ ಮತ್ತಿತರ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ತಡಿಯಂಗಡ ಸೌಮ್ಯ ಕರುಂಬಯ್ಯ ಅವರು ಸ್ವಾಗತಿಸಿ, ಚಂಗುಲಂಡ ಅಶ್ವಿನಿ ಹಾಗೂ ಮಲ್ಲೆಂಗಡ ಜಾಗೃತಿ ಅಯ್ಯಪ್ಪ ಕಾರ್ಯಕ್ರಮ ನಿರೂಪಿಸಿ, ಮಲ್ಲೆಂಗಡ ಜಾಗೃತಿ ಅಯ್ಯಪ್ಪ ವಂದಿಸಿದರು. ತೀರ್ಪುಗಾರರಾಗಿ ಇಟ್ಟೀರ ಕಮಲಾಕ್ಷಿ ಬಿದ್ದಪ್ಪ, ಕಾಳಿಮಾಡ ಬಿದ್ದಪ್ಪ ಕಾರ್ಯನಿರ್ವಹಿಸಿದರು. ಕಾವೇರಿ ಪೊಮ್ಮಕ್ಕಡ ಕೂಟದ ನಿರ್ದೇಶಕರಾದ ಪರದಂಡ ಸುಮಿ ಬೋಪಣ್ಣ, ಮುಕ್ಕಾಟಿರ ಬೀನಾ ಪ್ರಸನ್ನ, ಬಲ್ಯಮಿದೇರಿರ ಆಶಾ, ಆಪಟ್ಟಿರ ಸೌಮ್ಯ ಮೊಣ್ಣಪ್ಪ, ಸಣ್ಣುವಂಡ ಡಯಾನ, ಕಾಳಿಮಾಡ ನಯನ ಜಗತ್, ಸಲಹೆಗಾರರಾದ ಕೊಕ್ಕಂಡ ರೂಪಾ, ಸದಸ್ಯೆ ಪೂದ್ರಿಮಾಡ ಸರಿತಾ ತಮ್ಮಯ್ಯ ಮತ್ತಿತರರು ಹಾಜರಿದ್ದರು.
ಸಾಂಸ್ಕøತಿಕ ವೈವಿಧ್ಯ
ಜಿಲ್ಲೆಯ ವಿವಿಧೆಡೆಗಳ ಪೊಮ್ಮಕ್ಕಡ ಕೂಟ, ಸಂಘಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಂಸ್ಕøತಿಕ ವೈವಿಧ್ಯತೆ ಮೂಲಕ ಗಮನ ಸೆಳೆದರು. ಮಡಿಕೇರಿ, ಮಕ್ಕಂದೂರು, ಅಮ್ಮತ್ತಿ, ವೀರಾಜಪೇಟೆ, ಬಾಳೆಲೆ, ಹೊಸೂರು, ಕೊಟ್ಟಗೇರಿ, ಕಾನೂರು, ಬೆಕ್ಕೆಸೊಡ್ಲೂರು, ಪೊನ್ನಂಪೇಟೆ, ಹೈಸೊಡ್ಲೂರು, ಅಪ್ಪಚ್ಚಕವಿ ಶಾಲೆ, ಮಾಯಮುಡಿ, ಟಿ. ಶೆಟ್ಟಿಗೇರಿ ಸೇರಿದಂತೆ ಇನ್ನಿತರ ತಂಡಗಳಿಂದ ನೃತ್ಯ, ಹಾಡು ಮತ್ತಿತರ ಸಾಂಸ್ಕøತಿಕ ಪ್ರದರ್ಶನ ನಡೆಯಿತು.
ವಿಶೇಷವಾಗಿ ಕೊಡವಾಮೆಯಲ್ಲಿ ಪಳೆಯಾಮೆ - ಪುದಿಯಾಮೆ ಎಂಬ ಪರಿಕಲ್ಪನೆಯ ರ್ಯಾಂಪ್ವಾಕ್ ಪ್ರದರ್ಶನ ಆಕರ್ಷಕವಾಗಿತ್ತು. ವಾಲಗತಾಟ್ನಲ್ಲೂ ಮಹಿಳೆಯರು ಪಾಲ್ಗೊಂಡಿದ್ದರು. ದಿನವಿಡೀ ಜರುಗಿದ ಕಾರ್ಯಕ್ರಮ ವಿವಿಧೆಡೆಯ ಮಹಿಳಾ ಸಂಘಗಳನ್ನು ಒಂದುಗೂಡುವಂತೆ ಮಾಡಿತ್ತು. ಕಬ್ಬಚ್ಚಿರ ರಶ್ಮಿ, ಮಾಳೇಟಿರ ಅಜಿತ್ ಅವರಿಂದ ಆರ್ಕೆಸ್ಟ್ರಾ ಮೂಡಿಬಂತು.
- ಶಶಿ