ಮರಗೋಡು, ಏ. 4: ಹಾಕತೂರು-ಮರಗೋಡು ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.

ಅಪಘಾತದಲ್ಲಿ ಕಾರಿನಲ್ಲಿದ್ದ ಕಟ್ಟೆಮಾಡು ಗ್ರಾಮದ ಬಿದ್ರುಪಣೆ ಸೋಮಣ್ಣ ಅವರ ಪುತ್ರ ಪ್ರವೀಣ್ (31) ಅವರು ಸ್ಥಳದಲ್ಲಿ ಮೃತಪಟ್ಟಿದ್ದು ಉಳಿದವರು ಪ್ರಾಣಪಾಯದಿಂದ ಪಾರಾಗಿದ್ದು ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಟ್ಟೆಮಾಡು ಗ್ರಾಮದ ಬಿದ್ರುಪಣೆ ಕುಟುಂಬದ ವಿವಾಹ ಕಾರ್ಯಕ್ರಮವು ಮಡಿಕೇರಿಯ ಗೌಡ ಸಮಾಜದಲ್ಲಿ ತಾ.4 ಹಾಗೂ 5 ರಂದು ನಡೆಸುವ ಸಲುವಾಗಿ ಸಿದ್ಧತೆಯನ್ನು ಮಾಡಿಕೊಳ್ಳಲು ನಿನ್ನೆ ಮಡಿಕೇರಿಗೆ ತೆರಳಿ ಹಿಂತಿರುಗಿ ಬರುವ ಸಂದರ್ಭದಲ್ಲಿ ಘಟನೆ ನಡೆದಿದ್ದು ಮದುವೆಯ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಹಾಕತ್ತೂರು ಮತ್ತು ಮರಗೋಡು ಗ್ರಾಮದ ಮಧ್ಯೆ ಸಿಗುವ ಬಕ್ಕ ಎಂಬ ಸ್ಥಳದಲ್ಲಿ ಕಾರು, ಚಾಲಕನ ನಿಯಂತ್ರಣ ತಪ್ಪಿ ಐದರಿಂದ ಆರು ಬಾರಿ ರಸ್ತೆಯಲ್ಲಿ ಉರುಳಿ ಪಕ್ಕದ ಚರಂಡಿಗೆ ಬಿದ್ದಿದೆ. ಈ ಸಂದರ್ಭ ಪ್ರವೀಣ್, ಕಾರಿನಿಂದ ಹೊರಕ್ಕೆ ಎಸೆಯಲ್ಟಪಟ್ಟು ಮಾರಣಾಂತಿಕವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನಪ್ಪಿದ್ದಾರೆ.

ಕಾರಿನಲ್ಲಿದ್ದ ಕರಿಯ, ಗಣೇಶ, ವಿಜಯ್ ಹಾಗೂ ದಾವಣಗೆರೆಯ ವಿದ್ಯಾರ್ಥಿ ಆದರ್ಶ ಅವರುಗಳಿಗೆ ಗಾಯಗಳಾಗಿವೆ. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತಪಟ್ಟ ಪ್ರವೀಣ್ ಎಂಬವರು ಅವಿವಾಹಿತರಾಗಿದ್ದು, ಒಬ್ಬ ಸಹೋದರ, ಒಬ್ಬಳು ಸಹೋದರಿ ಹಾಗೂ ಪೆÇೀಷಕರನ್ನು ಅಗಲಿದ್ದಾರೆ.

- ಐಮಂಡ ಲವಕುಮಾರ್