ಶನಿವಾರಸಂತೆ, ಏ. 4: ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾ ಮಹಿಳಾ ಘಟಕದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, ಅಕ್ಕನ ಜಯಂತಿ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿಯವರ ಜಯಂತೋತ್ಸವ ಕಾರ್ಯಕ್ರಮ ಶುಕ್ರವಾರ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿಂದ ಜರುಗಿತು.

ಬೆಳಿಗ್ಗೆ ಗುಡುಗಳಲೆ ಶ್ರೀ ಬಸವೇಶ್ವರ ದೇವಸ್ಥಾನದಿಂದ ಶ್ರೀ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರದೊಂದಿಗೆ ಕಳಶ ಹೊತ್ತ ಮಹಿಳೆಯರು, ಚಂಡೆವಾದ್ಯ, ವೀರಗಾಸೆ ಕಲಾವಿದರ ಆಕರ್ಷಕ ಮೆರವಣಿಗೆ ಶನಿವಾರಸಂತೆಯ ಮುಖ್ಯರಸ್ತೆಯಲ್ಲಿ ಸಾಗಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಶ್ರೀನಂದೀಶ್ವರ ಕಲ್ಯಾಣ ಮಂಟಪ ತಲುಪಿತು. ನಂತರ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಕಲ್ಲುಮಠದ ಮಹಾಂತಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಮಾದ್ರೆ ಮುದ್ದಿನಕಟ್ಟೆ ಮಠದ ತೊರೆನೂರು ವಿರಕ್ತಮಠದ ಮಲ್ಲೇಶಸ್ವಾಮೀಜಿ, ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ ಹಾಗೂ ಮುಳ್ಳೂರು ಸ್ವತಂತ್ರ ಬಸವಲಿಂಗ ತೋಂಟದಾರ್ಯ ಸ್ವಾಮೀಜಿಗಳು ದಿವ್ಯಸಾನಿಧ್ಯ ವಹಿಸಿದ್ದರು.

ಕಾರ್ಯಕ್ರಮವನ್ನು ವೇದಿಕೆಯಲ್ಲಿದ್ದ ಗಣ್ಯರ ಜತೆ ಉದ್ಘಾಟಿಸಿದ ಅ.ಭಾ.ವೀ.ಲಿಂ. ಮಹಾಸಭಾ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ಮುಕ್ತಾಂಬ ಮಾತನಾಡಿ, ನಡೆದಾಡುವ ದೇವರೆನಿಸಿಕೊಂಡ ಶ್ರೀಶಿವಕುಮಾರ ಸ್ವಾಮೀಜಿಯವರು ಅನ್ನದಾಸೋಹ, ವಿದ್ಯೆ ದಾಸೋಹ, ವಸತಿ ದಾಸೋಹ ಗಳನ್ನು ನೀಡಿದ್ದು, ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲ; ರಾಷ್ಟ್ರದಲ್ಲಿ ಮಾತ್ರವಲ್ಲ; ವಿಶ್ವದಲ್ಲೇ ಶಿಷ್ಯ ಪರಂಪರೆ ಇದೆ. ಸ್ತ್ರೀ-ಪುರುಷ ಸಮಾನತೆಯನ್ನು ಸಾಧಿಸಿದವರು, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜದ ಏಳಿಗೆಗಾಗಿ ದುಡಿದವರು ಸ್ವಾಮೀಜಿ. ಹೆಣ್ಣು-ಗಂಡಿಗೆ ವಿದ್ಯೆ ಸಮಾನವಾಗಿ ಸಿಗಬೇಕು ಎಂದು ಹೇಳಿದ ಆಧುನಿಕ ಬಸವಣ್ಣನವರು ಶಿವಕುಮಾರ ಸ್ವಾಮೀಜಿ ಎಂದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಂಸ್ಥೆಯನ್ನು ಸ್ಥಾಪಿಸಿ 121 ವರ್ಷಗಳು ಕಳೆದಿವೆ. ಜನತೆಗೆ ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಹೋರಾಟ ಮಾಡಲು ಇರುವ ಸಂಸ್ಥೆಯಾಗಿದೆ. ನಮ್ಮ ಸಮಾಜ ಎಂಬ ಹೆಮ್ಮೆ ಇದ್ದರೆ ಹೆಣ್ಣುಮಕ್ಕಳು ಸಮಾನತೆಗಾಗಿ ಸದಸ್ಯತ್ವ ಪಡೆಯಬೇಕು ಎಂದು ಕರೆ ನೀಡಿದರು. ಕೊಡ್ಲಿಪೇಟೆ ಕಲ್ಲುಮಠದ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು. ಅ.ಭಾ.ವೀ.ಲಿಂ.ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ.ಶಿವಪ್ಪ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಹಿಳಾ ವಿಭಾಗದ ಅಧ್ಯಕ್ಷೆ ದೀಪಿಕಾ ಕರುಣ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘದ ಸದಸ್ಯೆಯರನ್ನು ಸಂಘಟಿಸಿ ಅಭಿವೃದ್ಧಿಪಡಿಸಲಾಗುವುದು.

ಮಹಿಳೆಯರ ಜೀವನ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ಮುಖ್ಯ ಅತಿಥಿಗಳಾಗಿ ಅ.ಭಾ.ವೀ.ಲಿಂ. ಮಹಾಸಭಾ ರಾಜ್ಯ ನಿರ್ದೇಶಕರಾದ ಅನುರಾಧ ಚಂದ್ರಶೇಖರ್, ಸುಮಾ ಸುದೀಪ್, ಜಿಲ್ಲಾ ಉಪಾಧ್ಯಕ್ಷರಾದ ಎಸ್.ಎಸ್. ಸುರೇಶ್, ಎಚ್.ಜೆ. ಪ್ರವೀಣ್, ಸೋಮವಾರಪೇಟೆ ತಾಲೂಕು ನಿಕಟಪೂರ್ವ ಅಧ್ಯಕ್ಷರಾದ ಕೆ.ಬಿ. ಹಾಲಪ್ಪ, ಡಿ.ಬಿ.ಧರ್ಮಪ್ಪ, ವೀರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ರಾಜೇಶ್, ಇತರ ಪದಾಧಿಕಾರಿಗಳು, ಪ್ರಮುಖರಾದ ಕಾಳಿಂಗಪ್ಪ, ಮಧು, ಇಂಪನಾ, ಯಶೋದಾ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು, ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹೆಣ್ಣು ಮಕ್ಕಳು ನೃತ್ಯ ಮತ್ತಿತರ ಸಾಂಸ್ಕøತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು. ಸಮಾರಂಭದಲ್ಲಿ ವೀರಗಾಸೆ ನೃತ್ಯ ಕಲಾವಿದರನ್ನು, ದಾನಿ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಗುಡುಗಳಲೆ ಜಾತ್ರಾ ಮೈದಾನದಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು ವಿವಿಧ ಬಗೆಯ ಆಕರ್ಷಕ ರಂಗೋಲಿ ಬಿಡಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಸ್ಪರ್ಧೆಯಲ್ಲಿ ಕಿತ್ತೂರಿನ ಪೂರ್ಣಿಮಾ ಪ್ರಥಮ, ಮಮತಾ ರವೀಶ್ ಹಾಗೂ ಹಾರೆಹೊಸೂರಿನ ಸಾನ್ವಿ ದ್ವಿತೀಯ ಬಹುಮಾನ ಗಳಿಸಿದರು. ಮಧ್ಯಾಹ್ನ ದಾಸೋಹವನ್ನು ಏರ್ಪಡಿಸಲಾಗಿತ್ತು.