ಗೋಣಿಕೊಪ್ಪಲು. ಏ. 4: ಸದಾ ಒತ್ತಡದ ನಡುವೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದು ಇದೀಗ ಗ್ರಾಮಸ್ಥರೊಂದಿಗೆ ಮುಕ್ತವಾಗಿ ಬೆರೆಯುವ ಸದುದ್ದೇಶದಿಂದ ಇದೆ ಮೊದಲ ಬಾರಿಗೆ ಕರ್ನಾಟಕ ಅರಣ್ಯ ಇಲಾಖೆ ಮತ್ತು ಬ್ರಹ್ಮಗಿರಿ ವನ್ಯಜೀವಿ ವಲಯ-ಮಾಕುಟ್ಟ ಇವರ ವತಿಯಿಂದ ‘ಹುಲಿಮಿತ’್ರ ಕಾರ್ಯಕ್ರಮವನ್ನು ದ.ಕೊಡಗಿನ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸುವ ಮೂಲಕ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಕೊಲ್ಲಿರ ಬೋಪಣ್ಣ ವಹಿಸಿದ್ದರು. ಸುತ್ತಮುತ್ತಲಿನ ಗ್ರಾಮದ ನೂರಾರು ಗ್ರಾಮಸ್ಥರು ಪಂಚಾಯಿತಿ ಆವರಣಕ್ಕೆ ಆಗಮಿಸುವ ಮೂಲಕ ಕೊಡಗು ವೈದ್ಯಕೀಯ ಕಾಲೇಜಿನ ಡೀನ್ ಡಾ. ಎ.ಜೆ.ಲೋಕೇಶ್ ಅವರ ನೇತೃತ್ವದಲ್ಲಿ 20 ವೈದ್ಯರ ತಂಡದಿಂದ ಉಚಿತ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡರು. ಜನರಲ್ ಚೆಕಪ್, ಇಸಿಜಿ, ಶುಗರ್ ಟೆಸ್ಟ್, ಬಿಪಿ ತಪಾಸಣೆ, ಸೇರಿದಂತೆ ಹಲವು ಚಿಕಿತ್ಸೆಗಳನ್ನು ನಡೆಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಆಸ್ಪತ್ರೆಗೆ ತೆರಳಲು ಸೂಚನೆ ನೀಡಲಾಯಿತು. ಮುಂಜಾನೆಯಿಂದ ಸಂಜೆಯವರೆಗೂ ವಿಶೇಷ ಉಚಿತ ಆರೋಗ್ಯ ತಪಾಸಣಾ ಶಿಬಿರವು ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಕೊಲ್ಲಿರ ಬೋಪಣ್ಣ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅರಣ್ಯ ಇಲಾಖೆಯು ನಡೆಸಿಕೊಟ್ಟ ಉಚಿತ ಆರೋಗ್ಯ ಶಿಬಿರ ಜನತೆಗೆ ಅನುಕೂಲವಾಗಿದೆ. ನುರಿತ ತಜ್ಞ ವೈದ್ಯರನ್ನು ಭೇಟಿ ಮಾಡುವ ಅವಕಾಶವು ಲಭಿಸಿದೆ. ಅರಣ್ಯ ಇಲಾಖೆಯು ಸದಾ ಒತ್ತಡದಲ್ಲಿದ್ದರೂ ಇಂತಹ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ರಜ ದಿನವಿದ್ದರೂ ಇದನ್ನು ಬದಿಗೊತ್ತಿ ಶಿಬಿರ ಆಯೋಜನೆ ಮಾಡಲು ಸಹಕರಿಸುವುದು ಶ್ಲಾಘನೀಯ ಎಂದರು. ಬ್ರಹ್ಮಗಿರಿ ವನ್ಯಜೀವಿ ವಲಯ ಮಾಕುಟ್ಟ ವಲಯದ ಅರಣ್ಯ ಅಧಿಕಾರಿಗಳಾದ ಎಸ್ ವಿವೇಕ್ ಮಾತನಾಡಿ, ನಾಡಿನ ಜನತೆಯೊಂದಿಗೆ ಉತ್ತಮ ಒಡನಾಟ ಬೆಳೆಸಲು ಹಾಗೂ ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸಲು ಇದೇ ಮೊದಲ ಬಾರಿಗೆ ಇಲಾಖೆಯ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬಿ ಶೆಟ್ಟಿಗೇರಿ ಗ್ರಾ.ಪಂ. ಮಾಜಿ ಅಧ್ಯಕ್ಷರು ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒ ಉತ್ತಮ ರೀತಿಯಲ್ಲಿ ಸ್ಪಂದನ ನೀಡಿದ್ದಾರೆ. ಮಡಿಕೇರಿಯ ಮೆಡಿಕಲ್ ಕಾಲೇಜಿನ 20 ವೈದ್ಯರ ತಂಡ ಆಗಮಿಸಿ ಚಿಕಿತ್ಸೆ ನೀಡಿದಲ್ಲದೆ ಉಚಿತವಾಗಿಯೇ ಔಷಧಿಗಳನ್ನು ವಿತರಿಸಿದ್ದಾರೆ. ಮೆಡಿಕಲ್ ಕಾಲೇಜಿನಲ್ಲಿ ಸಿಗುವ ಪ್ರಯೋಜನಗಳನ್ನು ಜನತೆಗೆ ಮನವರಿಕೆ ಮಾಡಿದ್ದಾರೆ. ಇದರ ಪ್ರಯೋಜನ ಮುಂದಿನ ದಿನಗಳಲ್ಲಿ ಪಡೆಯುವಂತೆ ಕೋರಿದರು. ಮಡಿಕೇರಿ ಮೆಡಿಕಲ್ ಕಾಲೇಜಿನ ಡೀನ್ ಡಾ.ಎ.ಜೆ. ಲೋಕೇಶ್ ಮಾತನಾಡಿ, ಮಡಿಕೇರಿಯ ಮೆಡಿಕಲ್ ಕಾಲೇಜಿನಲ್ಲಿ ಎಲ್ಲಾ ರೀತಿಯ ಚಿಕಿತ್ಸೆಗಳು ಜನರಿಗೆ ಉಚಿತವಾಗಿ ದೊರೆಯುತ್ತಿವೆ. ಸದಾ ವೈದ್ಯರ ತಂಡ ಲಭ್ಯವಿರುತ್ತದೆ. ಇದರ ಪ್ರಯೋಜನ ಪಡೆಯಲು ಕೊಡಗಿನ ಜನತೆ ಮುಂದೆ ಬರಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೆ.ಎ ನೆಹರು, ಸಹಾಯಕ ಉಪ ಅರಣ್ಯಾಧಿಕಾರಿಗಳಾದ ವಿ.ಟಿ ಕಾರ್ಯಪ್ಪ, ಬ್ರಹ್ಮಗಿರಿ ವಲಯ ಉಪ ಅರಣ್ಯಾಧಿಕಾರಿಗಳಾದ ಕಿರಣ, ಗಣೇಶ ಆಚಾರಿ, ಡಾ.ಪವನ್ ಎಂ.ಬಿ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಎನ್.ಜಿ. ಪರಮೇಶ್, ಗ್ರಾಮದ ಪ್ರಮುಖರಾದ ಲಾಲಾ ಭೀಮಯ್ಯ, ಮತ್ತಿತರರು ಭಾಗವಹಿಸಿದ್ದರು.