ಮರಗೋಡು, ಏ. 4: ಪ್ರವಾಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ನಿಂತಿದ್ದ ಕಾರಿನ ಮೇಲೆ ಬಿದ್ದ ಘಟನೆ ಹಾಕತ್ತೂರು-ಮರಗೋಡು ರಸ್ತೆಯಲ್ಲಿ ನಿನ್ನೆ ಸಂಜೆ ನಡೆದಿದೆ. ಸಂಜೆ ಸುಮಾರು 7:30ಕ್ಕೆ ಮರಗೋಡು ಸಮೀಪದ ಚೊಳಂ ಗೋಡು ಸೇತುವೆ ಬಳಿ ಅಪಘಾತ ನಡೆದಿದ್ದು ಪ್ರವಾಸಿಗರು ಹಾಗೂ ಕಾರಿನಲ್ಲಿ ಇದ್ದ ಪ್ರಯಾಣಿಕರು ಚಿಕ್ಕ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಮರಗೋಡು ಮೂಲದ ಕುಟುಂಬದವರು ಮದುವೆಯ ಆಮಂತ್ರಣ ಪತ್ರವನ್ನು ಸಂಬಂಧಿಕರಿಗೆ ನೀಡಿ ಮರಗೋಡು ಕಡೆ ಹಿಂತಿರುಗಿ ಬರುವ ಸಂದರ್ಭ ಚೊಳಂಗೋಡು ಸೇತುವೆ ಬಳಿ ಕಾರನ್ನು ನಿಲ್ಲಿಸಿದಾಗ ತಿರುವಿನಲ್ಲಿ ಬರುತ್ತಿದ್ದ ಪ್ರಾವಾಸಿ ಬಸ್ ನಿಯಂತ್ರಣ ತಪ್ಪಿ ಕಾರಿನ ಮೇಲೆ ಬಿದ್ದಿದೆ. ಪರಿಣಾಮ ಎರಡು ವಾಹನಗಳಲ್ಲಿನ ಪ್ರಯಾಣಿಕರಿಗೆ ಗಾಯಗಳಾಗಿವೆ.
ಈ ರಸ್ತೆಯಲ್ಲಿ ಹಲವಾರು ಬಾರಿ ಅಪಘಾತಗಳು ನಡೆಯುತ್ತಿದ್ದು, ಲೋಕೋಪಯೋಗಿ ಇಲಾಖೆಯು ಸೂಚನಾ ಫಲಕಗಳನ್ನು ಸರಿಯಾದ ಸ್ಥಳಗಳಲ್ಲಿ ಅಳವಡಿಸದೆ ಇರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.